ಅಮರಾವತಿ, ಜೂ. 9 (ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಲೋಕಸಭಾ ಸದಸ್ಯರಾದ ಕೆ.ರಾಮ್ ಮೋಹನ್ ನಾಯ್ಡು ಮತ್ತು ಚಂದ್ರಶೇಖರ್ ಪೆಮ್ಮಸಾನಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇಂದು ಸಂಜೆ ನವದೆಹಲಿಯ ರಾಷ್ಟ್ರಪತಿಭವನದಲ್ಲಿ ನಡೆಯುವ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೊತೆಗೆ ಅವರ ಸಂಪುಟದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಟಿಡಿಪಿಯ ಮಾಜಿ ಸಂಸದ ಜಯದೇವ್ ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ ಪ್ರಕಾರ, ಶ್ರೀಕಾಕುಳ ಲೋಕಸಭಾ ಸದಸ್ಯರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಗುತ್ತದೆ ಮತ್ತು ಗುಂಟೂರು ಸಂಸದ ಪೆಮ್ಮಸಾನಿ ಅವರಿಗೆ ರಾಜ್ಯ ಸಚಿವ ಸ್ಥಾನ ಸಿಗಲಿದೆ. “ಹೊಸ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ದೃಢೀಕರಿಸಲ್ಪಟ್ಟ ನನ್ನ ಯುವ ಸ್ನೇಹಿತ ಅವರಿಗೆ ಅಭಿನಂದನೆಗಳು. ನಿಮ್ಮ ಪ್ರಾಮಾಣಿಕತೆ ಮತ್ತು ವಿನಮ್ರ ಸ್ವಭಾವವು ಖಂಡಿತವಾಗಿಯೂ ದೇಶದ ಅಭಿವೃದ್ಧಿಗೆ ಆಸ್ತಿಯಾಗಲಿದೆ. ನಿಮ್ಮ ಹೊಸ ಪಾತ್ರದಲ್ಲಿ ನಿಮಗೆ ಶುಭ ಹಾರೈಸುತ್ತೇನೆ.”ಎಂದು ಜಯದೇವ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.
ನಾಯ್ಡು ಅವರು ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದಾರೆ ಮತ್ತು ಶ್ರೀಮಂತ ಸಂಸದರೆಂದು ಪರಿಗಣಿಸಲ್ಪಟ್ಟ ಪೆಮ್ಮಸಾನಿ ಅವರು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 16 ಲೋಕಸಭಾ ಸದಸ್ಯರನ್ನು ಹೊಂದಿರುವ ಟಿಡಿಪಿಯ ಬೆಂಬಲ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ನಿರ್ಣಾಯಕವಾಗಿದೆ.ಆಂಧ್ರಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಎನ್‍ಡಿಎ ಮೈತ್ರಿಕೂಟವು 25 ರಲ್ಲಿ 21 ಸ್ಥಾನಗಳಲ್ಲಿ ಜಯಗಳಿಸಿವೆ.