Wednesday, December 31, 2025
Homeರಾಜ್ಯಹೊಸ ವರ್ಷದ ಸ್ವಾಗತಕ್ಕೆ ಕ್ಷಣಗಣನೆ : ಬೆಂಗಳೂರಿನಾದ್ಯಂತ ಪೊಲೀಸರ ಹದ್ದಿನ ಕಣ್ಣು

ಹೊಸ ವರ್ಷದ ಸ್ವಾಗತಕ್ಕೆ ಕ್ಷಣಗಣನೆ : ಬೆಂಗಳೂರಿನಾದ್ಯಂತ ಪೊಲೀಸರ ಹದ್ದಿನ ಕಣ್ಣು

Countdown to welcome the New Year:, police on Alert

ಬೆಂಗಳೂರು,ಡಿ.31- ಹೊಸ ವರ್ಷದ ಸಂಭ್ರ ಮಾಚರಣೆ ವೇಳೆ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಭ್ರಮಾಚರಣೆ ಸಂದರ್ಭದಲ್ಲಿ ಪೊಲೀಸ್‌‍ ಬಿಗಿ ಬಂದೋಬಸ್ತ್‌ ಕೈಗೊಳ್ಳಲು ವೈಜ್ಞಾನಿಕವಾಗಿ, ವ್ಯವಸ್ಥಿತವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಎಲ್ಲೆಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆಯೋ ಅಂಥ ಕಡೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದ್ದು, ಪೊಲೀಸರು ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಭ್ರಮಾಚರಣೆ ವೇಳೆ ನಡೆಯಲಾಗದಂತಹ ನಿತ್ರಾಣಗೊಂಡ ಪರಿಸ್ಥಿತಿಗೆ ತಲುಪಿದವರು, ಪ್ರಜ್ಞೆ ಕಳೆದುಕೊಂಡವರಿಗೆ 15 ಕಡೆಗಳಲ್ಲಿ ವಿಶ್ರಾಂತಿ ಸ್ಥಳವನ್ನು ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ರಾಂತಿ ಸ್ಥಳದಲ್ಲಿ ಇರಿಸಿ ಅವರು ಸಹಜ ಸ್ಥಿತಿಗೆ ಮರಳಿದ ನಂತರ ಅವರ ವಿಳಾಸ ಪತ್ತೆಹಚ್ಚಿ ಮನೆಗೆ ತಲುಪಿಸಲಾಗುವುದು. ಇದು ವಿಶೇಷವಾಗಿ ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಾಡಲಾಗಿದೆ.
ಕೇವಲ ಬೆಂಗಳೂರಿಗೆ ಮಾತ್ರ ಮುನ್ನೆಚ್ಚರಿಕೆ ಕೈಗೊಳ್ಳಲಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಕ್ರಮ ಕೈಗೊಂಡಿದ್ದು, ಪೊಲೀಸರ ಜೊತೆ ಸಹಕರಿಸಿ ಸಂಭ್ರಮಾಚರಣೆಯನ್ನು ಜವಾಬ್ದಾರಿಯುತವಾಗಿ ಆಚರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಬೆಂಗಳೂರಿಗೆ ಬಹಳಷ್ಟು ಜನರು ಹೊರಗಿನಿಂದ ಬರುತ್ತಾರೆ. ಕನ್ನಡಿಗರು ಸಂಖ್ಯೆ ಕಡಿಮೆ ಇರುತ್ತದೆ. ಮಧ್ಯರಾತ್ರಿ ಸಂಭ್ರಮಾಚರಣೆ ವೇಳೆ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಅಂತಹ ವೇಳೆ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾತ್ರಿ 1 ಗಂಟೆ ನಂತರ ಮದ್ಯದಂಗಡಿಗಳನ್ನು ಮುಚ್ಚಬೇಕು. ಮುಚ್ಚದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಅನವಶ್ಯಕವಾಗಿ ಅಪಘಾತಗಳು ಉಂಟಾಗಬಾರದೆಂಬ ಉದ್ದೇಶದಿಂದ ನಗರದಲ್ಲಿ 160 ಸ್ಥಳಗಳಲ್ಲಿ ತಪಾಸಣೆ ಕೈಗೊಳ್ಳಲಾಗಿದೆ. ಸಾರ್ವಜನಿಕರ ಹಿತ ಕಾಪಾಡು ಉದ್ದೇಶದಿಂದಲೇ ಈ ಕ್ರಮವಾಗಿದೆ. ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸಿ ಅಪಘಾತವಾಗುವುದನ್ನು ತಪ್ಪಿಸಲು ನಗರದ 160 ಕಡೆಗಳಲ್ಲಿ ವಾಹನಗಳನ್ನು ತಪಾಸಣೆಗೊಳಪಡಿಸಲಾಗುವುದು ಎಂದರು.

ಪೊಲೀಸರಿಗೂ ಬಾಡಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಏಕೆಂದರೆ ಆಯಾ ಸ್ಥಳದಲ್ಲಿನ ಪರಿಸ್ಥಿತಿ ಕಮಾಂಡ್‌ ಸೆಂಟರ್‌ಗೆ ತಲುಪಲಿದ್ದು, ತಕ್ಷಣ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು. 2026ರ ಹೊಸ ವರ್ಷದಲ್ಲಿ ಉತ್ತಮ ಆಡಳಿತ ನೀಡಬೇಕು. ಮಾದರಿ ರಾಜ್ಯವಾಗಬೇಕು ಎಂದು ಪರಮೇಶ್ವರ್‌ ಆಶಿಸಿದರು.

2023ರ ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಕಳೆದ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಈಡೇರಿಸಿದ್ದೇವೆ. ಉಳಿದಿರುವ ಇನ್ನೆರಡೂವರೆ ವರ್ಷಗಳಲ್ಲಿ ಬಾಕಿ ಭರವಸೆಗಳನ್ನು ಈಡೇರಿಸುತ್ತೇವೆ. ಭಾರತವು ಜಪಾನ್‌ನ್ನು ಹಿಂದಿಕ್ಕಿ ಈಗ 4ನೇ ಸ್ಥಾನಕ್ಕೆ ಬಂದಿದೆ. ಆರ್ಥಿಕವಾಗಿ ಸದೃಢವಾಗುತ್ತಿದೆ. ಅದೇ ರೀತಿ ನಮ ರಾಜ್ಯವೂ ಆರ್ಥಿಕವಾಗಿ ಮತ್ತಷ್ಟು ಸಬಲಗೊಂಡು ಆಡಳಿತದಲ್ಲಿ ಇನ್ನಷ್ಟು ಕ್ರಮಗಳಾಗಬೇಕೆಂದು ಬಯಸಿದರು.

ತಪ್ಪಿತಸ್ಥರ ವಿರುದ್ದ ಕ್ರಮ:
ಕಲಬುರುಗಿ ಜೈಲಿನಲ್ಲಿ ಮದ್ಯದ ಪಾರ್ಟಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಸಲಾಗುವುದು. ವಿಡಿಯೋ ಇತ್ತೀಚೆಗೆ ಮಾಡಿರುವ ಪಾರ್ಟಿಗೆ ಸಂಬಂಧಿಸಿದ್ದೇ? ಅಥವಾ ಹಳೆಯದೇ ಎಂಬುದನ್ನು ಪರಿಶೀಲಿಸಬೇಕಿದೆ. ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹಳೆಯ ವಿಡಿಯೋಗಳನ್ನು ಹರಿಬಿಡುವ ಸಾಧ್ಯತೆಯೂ ಇದೆ. ಒಂದು ವೇಳೆ ಹೊಸ ವಿಡಿಯೋ ಆಗಿದ್ದರೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿನಿಮಾಗಳನ್ನು ಪೈರೆಸಿ ಮಾಡುವುದರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

RELATED ARTICLES

Latest News