ನ್ಯೂಯಾರ್ಕ್, ಜೂ. 9- ವೆಸ್ಟ್‍ಇಂಡೀಸ್ ಹಾಗೂ ಅಮೇರಿಕಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಒಂಭತ್ತನೇ ಆವೃತ್ತಿಯ ಚುಟುಕು ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತಕ್ಕೆ ತಲುಪಬೇಕಾದರೆ ಪಾಕಿಸ್ತಾನ ತಂಡವು ಟೀಮ್ ಇಂಡಿಯಾ ವಿರುದ್ಧದ ಸವಾಲನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಬಾರಿಯ ವಿಶ್ವಕಪ್ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ 2022ರ ಟಿ20-ಐ ವಿಶ್ವಕಪ್ ಟೂರ್ನಿಯ ರನ್ನರ್‍ಅಪ್ ಪಾಕಿಸ್ತಾನ ತಂಡವು ತನ್ನ ಮೊದಲ ಪಂದ್ಯದಲ್ಲೇ ಅತಿಥೇಯ ಅಮೇರಿಕಾ ವಿರುದ್ಧ ಸೂಪರ್ ಸೋಲು ಕಂಡಿದೆ.
ಇಂದು ನ್ಯೂಯಾರ್ಕ್‍ನ ನೌಸೌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾದ ಕಠಿಣ ಸವಾಲನ್ನು ಎದುರಿಸುತ್ತಿದೆ. ಸೂಪರ್ 8 ಹಂತಕ್ಕೆ ತಲುಪಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲುವ ಒತ್ತಡದೊಂದಿಗೆ ಮೈದಾನಕ್ಕೆ ಇಳಿಯುತ್ತಿರುವ ಬಾಬರ್ ಆಝಮ್ ಪಡೆಯ ಬ್ಯಾಟ್ಸ್ ಮನ್‍ಗಳು ಟೀಮ್‍ಇಂಡಿಯಾದ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ನಿಭಾಯಿಸಿ ಹೈಸ್ಕೋರ್ ಕಲೆ ಹಾಕಬೇಕಾಗಿದೆ.
ಅಲ್ಲದೆ ತಮ್ಮ ಸಂಪ್ರದಾಯಿಕ ವೈರಿಯಾಗಿರುವ ಭಾರತ ತಂಡದಲ್ಲಿರುವ ದಿಗ್ಗಜರಾದ ರೋಹಿತ್‍ಶರ್ಮಾ, ವಿರಾಟ್‍ಕೊಹ್ಲಿ ಅವರನ್ನು ನಿಯಂತ್ರಿಸುವುದರ ಜೊತೆಗೆ ತಂಡದಲ್ಲಿರುವ ಇತರ ಬ್ಯಾಟರ್ಸ್ ಗಳ ರನ್ ದಾಹಕ್ಕೂ ಕಡಿವಾಣ ಹಾಕಬೇಕಾಗಿದೆ.
ಆದರೆ ಚುಟುಕು ವಿಶ್ವಕಪ್ ಟೂರ್ನಿಯ ಇತಿಹಾಸವನ್ನು ಗಮನಿಸಿದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೂ 7 ಬಾರಿ ಮುಖಾಮುಖಿಯಾಗಿದ್ದು 6 ಬಾರಿ ಟೀಮ್ ಇಂಡಿಯಾ ಗೆಲುವು ಸಾ„ಸಿ ಪ್ರಾಬಲ್ಯ ಮೆರೆದಿದೆ. ಆದರೆ 2021ರಲ್ಲಿ ಪಾಕಿಸ್ತಾನವು ಗೆಲುವಿನ ನಗೆ ಚೆಲ್ಲಿದೆ. ಇಂದಿನ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವನ್ನು ಮಣಿಸುವುದು ಪಾಕ್‍ಗೆ ಕಬ್ಬಿಣದ ಕಡಲೆಯಂತಾಗಿದ್ದು, ಸೂಪರ್8 ಹಂತ ತಲುಪುವ ಹಾದಿ ಕಠಿಣವಾಗಿದೆ.