ನವದೆಹಲಿ, ಜೂ.10- ನೂತನ ಸಚಿವರಿಗೆ ಪ್ರಧಾನಿ ನರೇಂದ್ರಮೋದಿ ಅವರು ಖಾತೆಗಳ ಹಂಚಿಕೆಗೆ ಚಾಲನೆ ನೀಡಿದ್ದು, ಬಹುತೇಕ ಸಂಜೆಯೊಳಗೆ ಅಧಿಕೃತ ಪಟ್ಟಿ ಬಿಡುಗಡೆಯಾಗುವ ಸಂಭವವಿದೆ. ಭಾನುವಾರ ಪ್ರಧಾನಿ ನರೇಂದ್ರಮೋದಿ ಅವರ ಜೊತೆ 31 ಸಂಪುಟ ದರ್ಜೆ, 36 ರಾಜ್ಯ ಖಾತೆ ಹಾಗೂ ಐವರು ಸ್ವತಂತ್ರ ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.
ಇದೀಗ ಮೋದಿಯವರು ತಮ ಸಂಪುಟ ಸಹೋದ್ಯೋಗಿಗಳಿಗೆ ಖಾತೆಗಳ ಹಂಚಿಕೆ ಸಂಬಂಧ ಹಿರಿಯ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಸಂಜೆ ಸಚಿವ ಸಂಪುಟ ಸಭೆ ಬಳಿಕ ನೂತನ ಸಚಿವರ ಖಾತೆಗಳು ಯಾವೆಂಬುದು ಬಹಿರಂಗಗೊಳ್ಳಲಿವೆ ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿಯು ಪ್ರಮುಖವಾಗಿ ಗೃಹ, ಹಣಕಾಸು, ವಿದೇಶಾಂಗ ವ್ಯವಹಾರ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ರಕ್ಷಣಾ, ರೈಲ್ವೆ ಸೇರಿದಂತೆ ಕೆಲವು ಪ್ರಮುಖ ಖಾತೆಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದೆ.
ಎನ್‌ಡಿಎ ಮಿತ್ರ ಪಕ್ಷವಾದ ಟಿಡಿಪಿ, ಜೆಡಿಯು, ಎಲ್‌ಜೆಪಿ, ಶಿವಸೇನೆ ಪಕ್ಷಗಳು ತಮಗೆ ಪ್ರಮುಖವಾದ ಖಾತೆಗಳನ್ನು ನೀಡಬೇಕೆಂದು ಸರ್ಕಾರ ರಚನೆಗೂ ಮುನ್ನವೇ ಬೇಡಿಕೆ ಇಟ್ಟಿದ್ದರು. ಅದರಲ್ಲೂ ಟಿಡಿಪಿ ತನಗೆ ನೀರಾವರಿ, ಕೃಷಿ ಖಾತೆ ಕೇಳಿದರೆ ಜೆಡಿಯು ರೈಲ್ವೆ, ಕೃಷಿ ಖಾತೆಗಳ ಮೇಲೆ ಕಣ್ಣಿಟ್ಟಿತ್ತು. ಆದರೆ ಬಿಜೆಪಿ ಪ್ರಮುಖ ಖಾತೆಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡದೆ ತನ್ನ ಬಳಿಯೇ ಉಳಿಸಿಕೊಳ್ಳಲು ತೀರ್ಮಾನಿಸಿದೆ.
ಈ ಹಿಂದೆ ಸಚಿವರಾಗಿದ್ದ ಅಮಿತ್ ಷಾ, ರಾಜನಾಥ್ ಸಿಂಗ್, ಜೈಶಂಕರ್, ನಿರ್ಮಲ ಸೀತಾರಾಮನ್, ಪ್ರಹ್ಲಾದ್ ಜೋಷಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಮತ್ತಿತರರಿಗೆ ಅದೇ ಖಾತೆಗಳು ಮುಂದುವರೆಯಲಿವೆ ಎಂದು ತಿಳಿದುಬಂದಿದೆ.
ಎನ್‌ಡಿಎ ಮೈತ್ರಿ ಪಕ್ಷವಾಗಿರುವ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರು ತಮಗೆ ಕೃಷಿ ಇಲ್ಲವೇ ಬೃಹತ್ ನೀರಾವರಿ ಖಾತೆ ನೀಡಬೇಕೆಂಬ ಪ್ರಸ್ತಾವನೆಯನ್ನು ಪ್ರಧಾನಿಗಳ ಮುಂದಿಟ್ಟಿದ್ದರು.
ಒಂದು ಮೂಲದ ಪ್ರಕಾರ ಕುಮಾರಸ್ವಾಮಿಗೆ ಮಹತ್ವದ ಕೃಷಿ ಖಾತೆಯನ್ನು ನೀಡಲು ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಭವಿಷ್ಯದಲ್ಲಿ ಎನ್‌ಡಿಎ ಮಿತ್ರ ಪಕ್ಷಗಳಾದ ಜೆಡಿಯು, ಟಿಡಿಪಿ ಜೊತೆ ಸಮನ್ವಯ ಸಾಧಿಸಲು ಕುಮಾರಸ್ವಾಮಿ ಅವರನ್ನು ಮುಂಚೂಣಿಗೆ ತರಲು ಮೋದಿ ವಿಶೇಷ ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿಯೇ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಬಿಜೆಪಿಯ 8 ಸಚಿವರ ಗೌಪ್ಯತೆ ಮುಗಿದ ನಂತರ ಎನ್‌ಡಿಎ ಮಿತ್ರಪಕ್ಷಗಳ ಪೈಕಿ ಮೊದಲು ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿತ್ತು. ಇದು ಸರ್ಕಾರದಲ್ಲಿ ಎಚ್‌ಡಿಕೆಗೆ ಸಿಗುತ್ತಿರುವ ಮನ್ನಣೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಿಂದ ಈ ಬಾರಿ ಸಂಪುಟದಲ್ಲಿ ಮೂವರಿಗೆ ಸಂಪುಟ ದರ್ಜೆಯ ಖಾತೆಗಳು ಸಿಗುವ ಸಾಧ್ಯತೆ ಇದೆ. ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ನಿರ್ಮಲಾ ಸೀತಾರಾಮನ್ ಅವರುಗಳಿಗೆ ಸಂಪುಟ ಖಾತೆಗಳು ಸಿಕ್ಕರೆ ಕಳೆದ ಬಾರಿ ರಾಜ್ಯ ಸಚಿವರಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಮತ್ತು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ವಿ.ಸೋಮಣ್ಣಗೆ ರಾಜ್ಯ ಖಾತೆ ಲಭಿಸಲಿದೆ.
ಎನ್‌ಡಿಎ ತನ್ನ ಮಿತ್ರ ಪಕ್ಷಗಳಿಗೆ 11 ಸಂಪುಟ ದರ್ಜೆಯ ಖಾತೆಗಳನ್ನು ಬಿಟ್ಟು ಕೊಡಬೇಕಾಗಿರುವುದರಿಂದ ಕೆಲವು ಪ್ರಮುಖ ಇಲಾಖೆಗಳು ಮಿತ್ರ ಪಕ್ಷಗಳ ಪಾಲಾಗಲಿವೆ.
ಜೆಡಿಯು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಡಿಪಿ, ಜೆಡಿಯುಗೆ ಮಹತ್ವದ ಇಲಾಖೆಗಳ ಹೊಣೆಗಾರಿಯನ್ನು ನೀಡಲಾಗುತ್ತದೆ.
ಈ ಬಾರಿ ಮೋದಿಯವರ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚವ್ಹಾಣ್, ಮನಹರ್‌ಲಾಲ್ ಕಟ್ಟರ್, ಸರ್ಬಾನಂದ ಸೋನವಾಲ್, ರಾಜನಾಥ್ ಸಿಂಗ್, ಜಿತಿನ್ ಮಾಂಜಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಒಟ್ಟು 6 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಹಿರಿತನದ ಮೇಲೆ ಖಾತೆಗಳನ್ನು ನೀಡುವ ಅನಿವಾರ್ಯತೆ ಎದುರಾಗಿದೆ.
ಸಂಪುಟದಲ್ಲಿ ಒಟ್ಟು 24 ರಾಜ್ಯಗಳಿಗೆ ಅವಕಾಶ ನೀಡಿರುವುದರಿಂದ ಪ್ರತಿಯೊಂದು ರಾಜ್ಯಗಳಿಗೂ ಸಂಪುಟ ದರ್ಜೆ ಹಾಗೂ ರಾಜ್ಯ ಖಾತೆಯನ್ನು ನೀಡಲಾಗುತ್ತದೆ.