ನವದೆಹಲಿ,ಜೂ.10– ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ)ನಡಿ 2 ಕೋಟಿ ನೂತನ ವಸತಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ನಿವಾಸದಲ್ಲಿ ನಡೆಯಲಿರುವ ಮೊದಲ ಸಂಪುಟದಲ್ಲೇ ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಿದೆ.
ಲೋಕಸಭೆ ಚುನಾವಣೆ ಪೂರ್ವ ದೇಶದ ಜನತೆಗೆ ನೀಡಿದ ವಾಗ್ದಾನದಂತೆ ದೇಶಾದ್ಯಂತ 2 ಕೋಟಿ ವಸತಿಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡುವ ಮಹತ್ವದ ತೀರ್ಮಾನ ಸಂಪುಟದಲ್ಲಿ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಕೇಂದ್ರ ಸಚಿವ ಸಂಪುಟ ಸಭೆಯು ಪಿಎಂಎವೈ-ಜಿ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ಶೇ.50ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ.ನಾವು ಜನತೆಗೆ ಯಾವೆಲ್ಲ ಭರವಸೆಗಳನ್ನು ನೀಡಿದ್ದೆವೊ ಅವೆಲ್ಲವನ್ನೂ ಈಡೇರಿಸಲೇ ಬೇಕು ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಪುಟದ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೊಂದು ಮೂಲಗಳ ಪ್ರಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸಂಸತ್‌ನ ಉಭಯ ಸದನಗಳ ಜಂಟಿ ಅಧಿವೇಶನಕ್ಕೆ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.ಅಲ್ಲದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಹ್ವಾನ ನೀಡಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.
ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ ಸಹೋದ್ಯೋಗಿಗಳಿಗೆ ಮುಂದಿನ 100 ದಿನದೊಳಗೆ ತಮ ಸರ್ಕಾರದ ಗುರಿ ಏನೆಂಬುದನ್ನು ಈಗಾಗಲೇ ಮಾಹಿತಿ ನೀಡಿರುವ ಮೋದಿ, ಜನರ ನಿರೀಕ್ಷೆಯನ್ನು ಈಡೇರಿಸಿ ಸುಸ್ಥಿರ, ಸುಭದ್ರ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವಂತೆ ಸೂಚನೆ ಕೊಟ್ಟಿದ್ದಾರೆ.
ಇದೇ ವೇಳೆ ಹೊಸ ಸಂಪುಟ ಸದಸ್ಯರಿಗೆ ತಮ್ಮ ಮೈ ಚಳಿ ಬಿಟ್ಟು ತಕ್ಷಣದಿಂದ ಕೆಲಸ ಮಾಡುವಂತೆ ಸೂಚಿಸಿ, ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ವಿಕಸಿತ ಭಾರತದ ಗುರಿ ಸಾಕಾರವಾಗಲು ನೆರವಾಗಿ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಹೊಸ ಸಂಪುಟ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ.