ಬೆಂಗಳೂರು, ಜೂ. 12- ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಯ ಹಿಂದೆ ವ್ಯವಸ್ಥಿತವಾದ ಖಾಸಗಿ ಜಾಲವೊಂದು ಸಕ್ರಿಯವಾಗಿರುವ ಕುರಿತು ಮಾಹಿತಿ ಬೆಳಕಿಗೆ ಬಂದಿದೆ.ನಿಗಮದಲ್ಲಿದ್ದ ಹಣವನ್ನು ಒಂದು ತಿಂಗಳ ಮಟ್ಟಿಗೆ ಪಡೆದುಕೊಂಡು ಅದನ್ನು ಬೇರೆ ಕಡೆ ಹೂಡಿಕೆ ಮಾಡಿ ಲಾಭ ಗಳಿಸಿ ತಿಂಗಳ ಬಳಿಕ ಕಮಿಷನ್ ಜೊತೆ ಅಸಲನ್ನು ವಾಪಸ್ ಸಂದಾಯ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ರೀತಿ ಹಲವು ಬಾರಿ ಹಣದ ವಹಿವಾಟು ನಡೆದಿದೆ ಎಂಬ ಮಾಹಿತಿಗಳಿವೆ. ಇದರ ಹಿಂದೆ ಸತ್ಯನಾರಾಯಣವರ್ಮ ಮತ್ತು ಆರ್‌ಬಿಎಲ್ ಬ್ಯಾಂಕಿನ ನಿವೃತ್ತ ಅಧಿಕಾರಿ ಚಂದ್ರಮೋಹನ್‌ರ ಕೈವಾಡ ಕಂಡುಬಂದಿದೆ.
ಈ ರೀತಿ ಪದೇಪದೇ ಹಣದ ವಹಿವಾಟು ನಡೆಸುವ ಮೂಲಕ ತಮ ಸಿವಿಲ್ ಸ್ಕೋರ್ ಅನ್ನು ಹೆಚ್ಚಿಸಿಕೊಂಡು ಅದರ ಮೂಲಕ ಬ್ಯಾಂಕ್‌ನಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದುಕೊಂಡು ಬೇರೆ ಬೇರೆ ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ.ಸತ್ಯನಾರಾಯಣ ವರ್ಮ ಅವರನ್ನು ತನಿಖಾಧಿಕಾರಿಗಳು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ನಿಗಮದ 97 ಕೋಟಿ ರೂ. ಗಳನ್ನು ನಕಲಿ ಬ್ಯಾಂಕುಗಳಿಗೆ ವರ್ಗಾವಣೆ ಮಾಡಿದ್ದ ಪ್ರಕರಣದಲ್ಲಿ ಈತ ಕಿಂಗ್‌ಪಿನ್ ಎಂದು ಹೇಳಲಾಗಿದೆ. 97 ಕೋಟಿ ರೂ.ಗಳ ಹಣ ವರ್ಗಾವಣೆಗೆ 5 ಕೋಟಿ ರೂ.ಗಳ ಕಮಿಷನ್ ನೀಡುವ ಭರವಸೆ ನೀಡಿ 4 ಕೋಟಿ ರೂ.ಗಳನ್ನು ಪಾವತಿಸಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ.
ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರು ಆತಹತ್ಯೆ ಮಾಡಿಕೊಂಡ ಬಳಿಕ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯಸರ್ಕಾರ ತನಿಖೆಯನ್ನು ಎಸ್‌ಐಟಿಗೆ ವಹಿಸಿದೆ. ಮತ್ತೊಂದೆಡೆ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸಿಬಿಐ ಕೂಡ ಎಫ್‌ಐಆರ್ ದಾಖಲಿಸಿದೆ.ಹಗರಣಕ್ಕೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ಕೂಡ ನೀಡಿದ್ದಾರೆ.