ಶ್ರೀನಗರ,ಜೂ.13- ಜಮ್ಮು ಮತ್ತು ಕಾಶೀರ ಪೊಲೀಸರು ನಿನ್ನೆ ದೋಡಾ ಜಿಲ್ಲೆಯಲ್ಲಿ ನಡೆದ ಎರಡು ದಾಳಿಗಳಲ್ಲಿ ಭಾಗಿಯಾಗಿರುವ ನಾಲ್ವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರ ಬಂಧನಕ್ಕೆ ಪೂರಕವಾಗುವ ಮಾಹಿತಿ ಒದಗಿಸಿದ್ದಲ್ಲಿ 20 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.
ಭದೇರ್ವಾಹನ್ ಚಟರ್ಗಲ್ಲದಲ್ಲಿ ರಾಷ್ಟ್ರೀಯ ರೈಲ್ಸ್ ಯೂನಿಟ್ ಮತ್ತು ಪೊಲೀಸರ ಜಂಟಿ ಚೆಕ್‌ಪೋಸ್ಟ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು. ಜಿಲ್ಲೆಯ ಗಂಡೋಹ್ ಪ್ರದೇಶದಲ್ಲಿ ನಿನ್ನೆ ಶೋಧ ತಂಡ ದಾಳಿ ನಡೆಸಿದ್ದು, ಓರ್ವ ಪೊಲೀಸ್ ಸೇರಿದಂತೆ ಏಳು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.
ಜಮ್ಮು ಮತ್ತು ಕಾಶೀರ ಪೊಲೀಸರು ನಾಲ್ವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಭಯೋತ್ಪಾದಕರು ಭದೆವಾರ್, ಥಾತ್ರಿ, ಗಂಡೋಹ್‌ನ ಕೆಲವೆಡೆ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಪ್ರತೀ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಘೋಷಿಸಲಾಗಿದೆ ಎಂದು ಕೂಡ ತಿಳಿಸಿದರು.
ಈ ಭಯೋತ್ಪಾದಕರು ಎಲ್ಲಿದ್ದಾರೆ? ಮತ್ತು ಅವರ ಚಲನವಲನದ ಬಗ್ಗೆ ಮಾಹಿತಿ ನೀಡುವಂತೆ ಜಮು ಮತ್ತು ಕಾಶೀರ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ. ಮಂಗಳವಾರ ರಾತ್ರಿ, ರಿಯಾಸಿ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕನ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿ, ಅವನ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿಯೂ ಘೋಷಿಸಿದರು.
ಭಾನುವಾರ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ 53 ಆಸನಗಳ ಬಸ್ ಮೇಲೆ ದಾಳಿ ನಡೆದಿತ್ತು. ಶಿವ ಖೋರಿ ದೇವಸ್ಥಾನದಿಂದ ಪೋನಿ ಪ್ರದೇಶದ ತೇರ್ಯಾತ್ ಗ್ರಾಮದ ಕತ್ರಾದಲ್ಲಿರುವ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ತೆರಳುತ್ತಿದ್ದ ವೇಲೆ ಭಯೋತ್ಪಾದಕರು ಗುಂಡಿನ ಬಸ್ ಮೇಲೆಯೇ ದಾಳಿ ನಡೆಸಿದರು. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಗುಂಡಿನ ದಾಳಿಯಿಂದ ಆಳ ಕಂದಕಕ್ಕೆ ಉರುಳಿ ಬಿದ್ದಿತ್ತು.
ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿ, 41 ಮಂದಿ ಗಾಯಗೊಂಡಿದ್ದರು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಆಕೋಶ ವ್ಯಕ್ತವಾಯಿತು. ಜನಸಾಮಾನ್ಯರಿಂದ ಹಿಡಿದು ಸಿನಿ ಸೆಲೆಬ್ರಿಟಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಈ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದರು, ಜೊತೆಗೆ ಶಾಂತಿಗೆ ಕರೆ ನೀಡಿದರು.