Friday, November 22, 2024
Homeರಾಜ್ಯಮೃತಪಟ್ಟ ಕೆಎಸ್‌‍ಆರ್‌ಟಿಸಿ ನೌಕರರು, ಪ್ರಯಾಣಿಕರ ಕುಟುಬದವರಿಗೆ ಪರಿಹಾರ ವಿತರಣೆ

ಮೃತಪಟ್ಟ ಕೆಎಸ್‌‍ಆರ್‌ಟಿಸಿ ನೌಕರರು, ಪ್ರಯಾಣಿಕರ ಕುಟುಬದವರಿಗೆ ಪರಿಹಾರ ವಿತರಣೆ

ಬೆಂಗಳೂರು,ಜೂ.13-ಅನಾರೋಗ್ಯ ಹಾಗೂ ಅಪಘಾತದಲ್ಲಿ ಮೃತಪಟ್ಟ ಕೆಎಸ್‌‍ಆರ್‌ಟಿಸಿ ನೌಕರರ ಅವಲಂಬಿತರಿಗೆ ಒಂದು ಕೋಟಿ ರೂ. ವಿಮಾ ಪರಿಹಾರ ಹಾಗೂ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಅವಲಂಬಿತರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರದ ಚೆಕ್‌ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿತರಿಸಿದರು.

ಶಾಂತಿನಗರದ ಕೆಎಸ್‌‍ಆರ್‌ಟಿಸಿ ಕಚೇರಿಯಲ್ಲಿ ಹಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟ ನಾಲ್ಕು ಮಂದಿ ಸಂಸ್ಥೆಯ ನೌಕರರ ಅವಲಂಬಿತರಿಗೆ ಒಂದು ಕೋಟಿ ರೂ. ವಿಮಾ ಪರಿಹಾರ, ಕುಟುಂಬ ಕಲ್ಯಾಣ ಯೋಜನೆಯಡಿ 23 ನೌಕರರ ಅವಲಂಬಿತರಿಗೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ವರು ಪ್ರಯಾಣಿಕರ ಅವಲಂಬಿತರಿಗೆ 10 ಲಕ್ಷ ರೂ.ಗಳ ಪರಿಹಾರದ ಚೆಕ್‌ ಅನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಸಚಿವರು, ಕೆಎಸ್‌‍ಆರ್‌ಟಿಸಿ ಸಂಸ್ಥೆಯ ಪ್ರಯಾಣಿಕರು ಹಾಗೂ ನೌಕರರ ಹಿತರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಜೀವ ಅಮೂಲ್ಯವಾದುದು. ಅದಕ್ಕೆ ಬೆಲೆ ಕಟ್ಟಲಾಗದು. ಆದರೆ, ಮೃತ ನೌಕರರ ಕುಟುಂಬದ ಆರ್ಥಿಕ ಸ್ವಾವಲಂಬನೆಗಾಗಿ ಜಾರಿಗೆ ತಂದಿರುವ ಯೋಜನೆಗಳು ದೂರದರ್ಶಿತ್ವ ಹೊಂದಿದೆ. ಪರಿಹಾರದ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಇತರೆ ಉದ್ದೇಶಗಳಿಗೆ ಹಣವನ್ನು ವೃಥಾ ಖರ್ಚು ಮಾಡಬೇಡಿ ಎಂದು ಸಲಹೆ ನೀಡಿದರು.

ಕೆಎಸ್‌‍ಆರ್‌ಟಿಸಿ ಅಧ್ಯಕ್ಷ ಶ್ರೀನಿವಾಸ್‌‍ ಮಾತನಾಡಿ, ನಿಗಮದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಶ್ರಮ ಜೀವಿಗಳಾಗಿದ್ದು, ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸಿಕೊಡುವುದು ನಮ ಆದ್ಯ ಕರ್ತವ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌, ಕಾರ್ಮಿಕ ಸಂಘಟನೆಗಳ ಮುಖಂಡ ಅನಂತ ಸುಬ್ಬರಾವ್‌, ವಿಜಯ ಭಾಸ್ಕರ್‌, ರೇವಪ್ಪ, ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News