ಚಿಕ್ಕಮಗಳೂರು,ಜೂ.13– ದಿಢೀರ್ ಪ್ರತ್ಯಕ್ಷವಾದ ಒಂಟಿ ಸಲಗ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೆ ಬೀಡುಬಿಟ್ಟದ್ದರಿಂದ ಧರ್ಮಸ್ಥಳದ ಕಡೆ ಹೋಗುವ ಹಾಗೂ ಚಿಕ್ಕಮಗಳೂರು ಕಡೆ ಬರುವ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು.
ಚಾರ್ಮುಡಿ ಘಾಟ್ನ 8ನೇ ತಿರುವಿನ ಬಳಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ ಮುಂಭಾಗ ದಿಢೀರ್ ಪ್ರತ್ಯಕ್ಷವಾದ ಸಲಗವನ್ನು ಕಂಡ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ ನಿಲ್ಲಿಸಿದ್ದಾರೆ. ಒಮೆಲೇ ಬಸ್ ನಿಂತಿದ್ದನ್ನು ಕಂಡು ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಬೆಚ್ಚುಬಿದ್ದಿದ್ದಾರೆ. ಬಸ್ ಮುಂದೆ ಆನೆ ಇದ್ದದ್ದನ್ನು ಕಂಡು ಗಾಬರಿಗೊಂಡರು.
ಕಳೆದ ಮೂರು ನಾಲ್ಕು ತಿಂಗಳಿನಿಂದ ಒಂಟಿ ಸಲಗ ಒಂದು ಚಾರ್ಮಡಿ ಘಾಟ್ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೆ ಓಡಾಡುತ್ತಿದ್ದು ಅರಣ್ಯ ಇಲಾಖೆ ಆನೆಯನ್ನು ಈ ಪ್ರದೇಶದಿಂದ ದೂರ ಕಳಿಸಿದ್ದರೂ ಕೂಡ ಪುನಃ ಇದು ಇಲ್ಲಿ ಪ್ರತ್ಯಕ್ಷವಾಗುತ್ತಿದೆ.
ಇದರಿಂದ ಜನ ಭಯಭೀತರಾಗಿದ್ದು ಚಾರ್ಮುಡಿ ಘಾಟಿ ರಸ್ತೆಯಲ್ಲಿ ಪ್ರಯಾಣಿಸುವಾಗ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾಗಿದೆ ಕೂಡಲೇ ಈ ಒಂಟಿ ಸಲಗವನ್ನು ಹಿಡಿದು ದೂರದ ಕಾಡಿಗೆ ರವಾನಿಸಬೇಕೆಂದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಅರಣ್ಯ ಇಲಾಖೆಯನ್ನ ಜನ ಒತ್ತಾಯಿಸಿದ್ದಾರೆ.