ಬೆಂಗಳೂರು, ಜೂ.15- ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.
ನಿನ್ನೆ ರಾತ್ರಿ ಕುಟುಂಬ ಸದಸ್ಯರೊಂದಿಗೆ ತಿರುಪತಿಗೆ ತೆರಳಿದ್ದ ಅವರು ಬೆಳಗಿನಜಾವ ಸುಪ್ರಭಾತ ಪೂಜೆಯ ಸಮಯದಲ್ಲಿ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದಿದ್ದಾರೆ. ತಿರುಪತಿಯಿಂದ ಬೆಂಗಳೂರಿಗೆ ಮರಳಿದ ಬಳಿಕ ಅವರು ವಿಧಾನಸೌಧದಲ್ಲಿ ವಿಧಾನಸಭಾಧ್ಯಕ್ಷರಿಗೆ ತಮ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ನಂತರ ತಮ ತವರು ಕ್ಷೇತ್ರ ಚನ್ನಪಟ್ಟಣಕ್ಕೆ ತೆರಳಿದರು. ಶಾಸಕರಾಗಿ ಇಂದು ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ತಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಪೂರ್ವ ನಿಯೋಜಿತವಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಚನ್ನಪಟ್ಟಣಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ಕೋರಿ ಅಭಿನಂದಿಸಲಾಯಿತು.
ಇಂದು ಸಂಜೆ ತಮ ಲೋಕಸಭಾ ಕ್ಷೇತ್ರವಾದ ಮಂಡ್ಯಕ್ಕೆ ತೆರಳಲಿದ್ದಾರೆ. ಮಂಡ್ಯದಲ್ಲಿ ಸಂಸದರ ಕಚೇರಿ ಪೂಜೆ ನೆರವೇರಿಸಲಿದ್ದು, ಬಳಿಕ ಬೆಂಗಳೂರಿಗೆ ಮರಳುವ ಕಾರ್ಯಕ್ರಮವಿದೆ. ನಿನ್ನೆ ಬೆಂಗಳೂರಿನಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದಂತೆ ಮಂಡ್ಯದಲ್ಲೂ ಅಭಿನಂದನೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಚುನಾಯಿತರಾದ ನಂತರ ಹಾಗೂ ಕೇಂದ್ರ ಸಚಿವರಾದ ಮೇಲೆ ಹೆಚ್‌ಡಿಕೆ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಹಾಗೂ ಅಭಿನಂದಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಸದರ ಕಚೇರಿ ಪೂಜೆ ನೆರವೇರಿಸುವ ಕುಮಾರಸ್ವಾಮಿ ಅವರು, ತಮನ್ನು ಚುನಾಯಿಸಿದ ಮತದಾರರಿಗೆ ಧನ್ಯವಾದ ಅರ್ಪಿಸಲಿದ್ದಾರೆ.