Monday, November 25, 2024
Homeರಾಜ್ಯಪೆಟ್ರೋಲ್‌- ಡೀಸೆಲ್‌ ತೆರಿಗೆ ಏರಿಕೆ ಬೆನ್ನಲ್ಲೇ ಬಸ್‌‍ ದರ ಹೆಚ್ಚಳ 'ಗ್ಯಾರಂಟಿ'

ಪೆಟ್ರೋಲ್‌- ಡೀಸೆಲ್‌ ತೆರಿಗೆ ಏರಿಕೆ ಬೆನ್ನಲ್ಲೇ ಬಸ್‌‍ ದರ ಹೆಚ್ಚಳ ‘ಗ್ಯಾರಂಟಿ’

ಬೆಂಗಳೂರು, ಜೂ.16- ಡೀಸೆಲ್‌ ಹಾಗೂ ಪೆಟ್ರೋಲ್‌ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯಸರ್ಕಾರ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆೆಎಸ್‌‍ಆರ್‌ಟಿಸಿ ಹಾಗೂ ಬಿಎಂಟಿಸಿ) ಬಸ್‌‍ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ.

ಈಗಾಗಲೇ ಶೇ.25 ರಿಂದ 35 ರಷ್ಟು ಟಿಕೆಟ್‌ ದರ ಹೆಚ್ಚಳದ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸಲ್ಲಿಸಿದ್ದು, ಅಂತಿಮವಾಗಿ ದರ ಪರಿಷ್ಕರಣೆಯ ತೀರ್ಮಾನವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ. ಮೂಲಗಳ ಪ್ರಕಾರ, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಸ್‌‍ದರ ಪರಿಷ್ಕರಣೆ ಕುರಿತಂತೆ ಸರ್ಕಾರ ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ.

ಮೂಲಗಳ ಪ್ರಕಾರ, ಸರ್ಕಾರ ಈ ಬಾರಿ ಬಸ್‌‍ ಪ್ರಯಾಣದ ದರವನ್ನು ಶೇ.15 ರಿಂದ 25 ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ ಹಿಂದೆ ಲೋಕಸಭಾ ಚುನಾವಣೆಗೂ ಮುನ್ನವೇ ಟಿಕೆಟ್‌ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಜೊತೆಗೆ ಚುನಾವಣಾ ಸಂದರ್ಭದಲ್ಲೇ ದರ ಹೆಚ್ಚಳ ಮಾಡಿದರೆ ಮತದಾರರ ಆಕ್ರೋಶಕ್ಕೆ ಗುರಿಯಾಗಬಹುದೆಂಬ ಕಾರಣದಿಂದ ಸರ್ಕಾರವು ತನ್ನ ನಿಲುವಿನಿಂದ ಹಿಂದೆ ಸರಿದಿತ್ತು.

ಇದೀಗ ಲೋಕಸಭಾ ಚುನಾವಣೆ ಮುಗಿದಿದ್ದು, ಪ್ರತೀ ಲೀಟರ್‌ ಡೀಸೆಲ್‌ಗೆ 3 ರೂ. ಹಾಗೂ ಪೆಟ್ರೋಲ್‌ಗೆ 3.50 ರೂ. ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಲಾಗಿದ್ದು, ಶನಿವಾರದಿಂದಲೇ ಪರಿಷ್ಕೃತ ದರ ರಾಜ್ಯಾದ್ಯಂತ ಜಾರಿಯಾಗಿದೆ. ಈಗ ಸಾರಿಗೆ ಸಂಸ್ಥೆಯಲ್ಲಿ ಉಂಟಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಸರ್ಕಾರ ಬಸ್‌‍ ದರವನ್ನು ಹೆಚ್ಚಳ ಮಾಡುವ ಅನಿವಾರ್ಯತೆಗೆ ಸಿಲುಕಿದೆ.

ಡೀಸೆಲ್‌ ಹಾಗೂ ಪೆಟ್ರೋಲ್‌ ದರ ಹೆಚ್ಚಳ ಮಾಡುವುದರಿಂದ ಕೆಎಸ್‌‍ಆರ್‌ಟಿಸಿಗೆ ವಾರ್ಷಿಕ 65 ಕೋಟಿ ರೂ. ಹಾಗೂ ಬಿಎಂಟಿಸಿಗೆ 32 ಕೋಟಿ ರೂ. ಹೊರೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೆಎಸ್‌‍ಆರ್‌ಟಿಸಿ ಪ್ರತಿದಿನ ಬಸ್‌‍ಗಳ ಕಾರ್ಯಾಚರಣೆಗೆ 6.2 ಲಕ್ಷ ಲೀಟರ್‌ ಡೀಸೆಲ್‌ ಖರೀದಿಸುತ್ತಿದೆ. ಇದರಿಂದ ತಿಂಗಳಿಗೆ 5.4 ಕೋಟಿ ಹಾಗೂ ವಾರ್ಷಿಕ 65 ಕೋಟಿಗೆ ಹೆಚ್ಚಳವಾಗಲಿದೆ.

ಹೀಗಾಗಿ ಬಸ್‌‍ ದರ ಏರಿಸುವುದು ಅನಿವಾರ್ಯ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದೇ ರೀತಿ ಬಿಎಂಟಿಸಿಗೂ ದಿನಕ್ಕೆ 8.7 ಲಕ್ಷ ರೂ. ಮೌಲ್ಯದ ಬೆಲೆಯ ಡೀಸೆಲ್‌ ಖರೀದಿಸಬೇಕಾಗುತ್ತದೆ. ವಾರ್ಷಿಕವಾಗಿ ನಮಗೆ 32 ಕೋಟಿ ರೂ. ಬೇಕು. ಪ್ರತಿ ಕಿ.ಮೀ.ಗೆ ನಿರ್ವಹಣಾ ವೆಚ್ಚ 66 ರಿಂದ 78 ರೂ. ಆಗುತ್ತದೆ. ಇದರಿಂದ ಸಂಸ್ಥೆ ನಿರ್ವಹಣೆ ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಆರ್ಥಿಕ ಸಂಕಷ್ಟ :
ರಾಜ್ಯಸರ್ಕಾರ ರಾಜ್ಯದಲ್ಲಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ ಸಾರಿಗೆ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆ ಜಾರಿಗೆ ಬಂದ ಮೇಲೆ ಮಹಿಳೆಯರೇನೋ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಬಸ್ಸುಗಳಿಗೆ ಆದಾಯವಿಲ್ಲದೆ, ಈಶಾನ್ಯ ಸಾರಿಗೆ ಸಂಸ್ಥೆ, ವಾಯವ್ಯ, ನೈರುತ್ಯ ಹಾಗೂ ಬಿಎಂಟಿಸಿ ಸಂಸ್ಥೆಗಳು ಕನಿಷ್ಟ ಪಕ್ಷ ಸಿಬ್ಬಂದಿಗಳಿಗೆ ವೇತನ ನೀಡಲೂ ಸಾಧ್ಯವಾಗದ ಸ್ಥಿತಿ ಬಂದಿದೆ.

ಸಂಸ್ಥೆ ನಷ್ಟದಲ್ಲಿಲ್ಲ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ ವಾಸ್ತವ ಚಿತ್ರಣ ಬೇರೆಯದೇ ಇದೆ. 2020 ರಲ್ಲಿ ಕೊನೆಯ ಬಾರಿಗೆ ಟಿಕೆಟ್‌ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಅಂದು ಡೀಸೆಲ್‌ ದರ 61 ರೂ. ಇದ್ದರೆ, ಪೆಟ್ರೋಲ್‌ ದರ 90 ಇತ್ತು. ಪ್ರಸ್ತುತ ರಾಜ್ಯದಲ್ಲಿ ಡೀಸೆಲ್‌ ದರ ಶನಿವಾರದಿಂದ ಬೆಂಗಳೂರಿನಲ್ಲಿ 88.93 ಪೈಸೆ ಇದ್ದರೆ, ಪೆಟ್ರೋಲ್‌ ದರ 102.83 ಪೈಸೆ ಇದೆ. ಕೇವಲ ನಾಲ್ಕು ವರ್ಷಗಳಲ್ಲಿ ಅಜಗಜಾಂತರ ವ್ಯತ್ಯಾಸವಿರುವುದರಿಂದ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಅಧಿಕಾರಿಗಳೇ ಹೇಳುತ್ತಾರೆ.

ಡೀಸೆಲ್‌ ಬೆಲೆ ಏರಿಕೆ, ಸಿಬ್ಬಂದಿಯ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಸಂಸ್ಥೆಗೆ ಆರ್ಥಿಕ ಹೊರೆ ಬೀಳುತ್ತಿದೆ. ಸಾರ್ವಜನಿಕ ಪ್ರಯಾಣಿಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊರೆಯಾಗದಂತೆ ಟಿಕೆಟ್‌ ದರವನ್ನು ಹೆಚ್ಚಳ ಮಾಡಲಾಗುತ್ತದೆ. ಅಂತಿಮವಾಗಿ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ.

ನಮ ಗಳಿಕೆಯ ಶೇ.45 ಕ್ಕಿಂತ ಹೆಚ್ಚು ಡೀಸೆಲ್‌ಗೆ ಹೋಗುತ್ತದೆ. ಅದರ ಬೆಲೆ ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚಾಗಿದೆ. ಮೊದಲು ದಿನಕ್ಕೆ 3 ಕೋಟಿ ರೂ. ಖರ್ಚು ಮಾಡಿತ್ತ್ದೆಿವು. ಆದರೆ ಈಗ 5 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಬೇಕಾಗಿದೆ. ಹೀಗಾದರೆ, ನಮ ಆರ್ಥಿಕ ಸಂಪನೂಲಗಳನ್ನು ನಾವು ಹೇಗೆ ನಿರ್ವಹಿಸುವುದು ಎಂದು ಪ್ರಶ್ನಿಸಿದ್ದಾರೆ.

ಸಗಟು ಬೆಲೆ ಸೂಚ್ಯಂಕಕ್ಕೆ (ಡಬ್ಲ್ಯುಪಿಐ) ಅನುಗುಣವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾರ್ಷಿಕವಾಗಿ ಹೆದ್ದಾರಿ ಟೋಲ್‌ಗಳನ್ನು ಹೇಗೆ ಹೆಚ್ಚಿಸುತ್ತದೆಯೋ ಹಾಗೆಯೇ ಬಸ್‌‍ ನಿಗಮಗಳು ಸಹ ಒಂದು ಸೂತ್ರವನ್ನು ಹೊಂದಿವೆ.

ಶೇ.20ರಷ್ಟು ಏರಿಕೆಯಾಗಿರುವ ವೇತನ, ಶೇ.46ರಷ್ಟು ಏರಿಕೆಯಾಗಿರುವ ಡೀಸೆಲ್‌ ಬೆಲೆ ಮತ್ತು ಬಿಡಿಭಾಗಗಳು ಮತ್ತು ಇತರ ಬೆಲೆಗಳನ್ನು ಪರಿಗಣಿಸಿದರೆ, ಟಿಕೆಟ್‌ ದರವನ್ನು ಸುಮಾರು ಶೇ.40ರಷ್ಟು ಹೆಚ್ಚಿಸಬೇಕಾಗುತ್ತದೆ. ಆದರೆ ಇದು ಸಾರ್ವಜನಿಕ ಬಸ್‌‍ ನಿಗಮವಾಗಿದ್ದು, ನಮ ಆದ್ಯತೆ ಲಾಭ ಗಳಿಸುವುದಲ್ಲ, ಅದು ಜನರ ಸೇವೆ. ಟಿಕೆಟ್‌ ದರವನ್ನು ತೀವ್ರವಾಗಿ ಹೆಚ್ಚಿಸಲು ನಾವು ಬಯಸುವುದಿಲ್ಲ, ಅದು ಜನರನ್ನು ಕಷ್ಟಕ್ಕೆ ನೂಕುತ್ತದೆ ಎಂದು ಹೇಳಿದ್ದಾರೆ.

ಈ ವರ್ಷ ಸರ್ಕಾರವು ಟಿಕೆಟ್‌ ದರ ಹೆಚ್ಚಳದ ಪ್ರಸ್ತಾವನೆಯನ್ನು ಅನುಮೋದಿಸುತ್ತದೆ. ಪ್ರತಿ ವರ್ಷ ಬಜೆಟ್‌ನಲ್ಲಿ ಹೊಸ ಬಸ್‌‍ಗಳನ್ನು ಖರೀದಿಸಲು, ನೌಕರರಿಗೆ ವೇತನ ನೀಡಿಕೆ ತೆರವುಗೊಳಿಸಲು, ಕಟ್ಟಡಗಳಿಗೆ ಮತ್ತು ಇತರರಿಗೆ ವಿಶೇಷ ಅನುದಾನವನ್ನು ನಾವು ಪಡೆಯುತ್ತೇವೆ. ಆದರೆ ಶಕ್ತಿ ಯೋಜನೆಯ ನಂತರ, ಸರ್ಕಾರವು ಯಾವುದೇ ಅನುದಾನವನ್ನು ನೀಡುತ್ತಿಲ್ಲ. ನಮ ಆದಾಯದಿಂದ ನಮ ನಿಗಮಗಳನ್ನು ನಡೆಸಬೇಕಾಗಿದೆ. ಹೆಚ್ಚಳದ ಪ್ರಸ್ತಾವನೆಯು ಶೇ. 25-30 ಆಗಿದ್ದರೆ, ಸರ್ಕಾರವು 15-20 ಪ್ರತಿಶತ ಹೆಚ್ಚಳವನ್ನು ಒಪ್ಪಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Latest News