ಇಸ್ಲಮಾಬಾದ್,ಜೂ.16- ಜಮ್ಮು- ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಉಗ್ರನನ್ನು ಅಪರಿಚಿತರು ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಸುದ್ದಿವಾಹಿನಿಗಳು ವರದಿ ಮಾಡಿವೆ.
ಜೂನ್ 9ರಂದು ಜಮು ಕಾಶೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರ ದಾಳಿ ನಡೆಸಿದ್ದರು. ಉಗ್ರರ ಗುಂಡಿನ ದಾಳಿಗೆ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಬಿದ್ದ ಪರಿಣಾಮ 10 ಮಂದಿ ಸಾವನ್ನಪ್ಪಿ 33ಕ್ಕೂ ಅಧಿಕ ಯಾತ್ರಾರ್ಥಿಗಳು ಗಾಯಗೊಂಡಿದ್ದರು.
ಈ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಉಗ್ರರನ್ನು ಸೆದೆಬಡಿಯಲು ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಸೂಚಿಸಿತ್ತು. ಅದರಂತೆ ಉಗ್ರರ ರೇಖಾಚಿತ್ರವನ್ನು ರಿಲೀಸ್ ಮಾಡಿದ್ದ ಸೇನೆ, ಈತನ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನವನ್ನೂ ಘೋಷಿಸಿತ್ತು.
ಉಗ್ರರ ತೀವ್ರ ಶೋಧ ನಡೆಯುವ ಹೊತ್ತಿನಲ್ಲಿಯೇ ಪಾಕ್‌ನಲ್ಲಿ ಈ ದಾಳಿಯ ಮಾಸ್ಟರ್ ಮೈಂಡ್ ಹತ್ಯೆ ನಡೆದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ರಿಯಾಸಿ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಅನ್ನು ಪಾಕಿಸ್ತಾನದಲ್ಲಿ ಅಪರಿಚಿತರು ಹತ್ಯೆ ಮಾಡಿರುವುದು ಉಳಿದ ಭಯೋತ್ಪಾದಕರನ್ನು ಭಯಗೊಳಿಸಿದೆ ಎಂದು ಅಲ್ಲಿನ ಮಾಧ್ಯಮಗಳು ಹೇಳಿವೆ.