ಮೈಸೂರು,ಜೂ.17– ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಸಿದೆ ಎಂದು ಬಿಜೆಪಿ ಮುಖಂಡ ಗುರುಪಾದ ಸ್ವಾಮಿ ಟೀಕಿಸಿದ್ದಾರೆ.
ಮುದ್ರಾಂಕ ಶುಲ್ಕ, ವಿದ್ಯುತ್ ದರ, ವಿವಿಧ ಕೆಲಸ ಕಾರ್ಯಗಳಿಗೆ ಬೇಕಾಗುವ ಸ್ಟಾಂಪ್ ಮುಖಬೆಲೆ ಏರಿಕೆ, ವೈದ್ಯಕೀಯ ಶಿಕ್ಷಣ ಸೇರಿದಂತೆ ವೃತ್ತಿ ಶಿಕ್ಷಣದ ಶುಲ್ಕ ಸೇರಿದಂತೆ ಅನೇಕ ದರಗಳನ್ನು ಈಗಾಗಲೇ ಹೆಚ್ಚಿಸಿರುವ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಭರಿಸಲು ಈಗ ರಾಜ್ಯದಲ್ಲಿ ತೈಲ ಬೆಲೆ ಏರಿಸುವ ಮೂಲಕ ಜನಸಾಮಾನ್ಯರಿಗೆ ಸೇಡು ತೀರಿಸಿಕೊಳ್ಳಲು ಹೊರಟಿದೆ ಎಂದು ಅವರು ದೂರಿದರು.
ಪೆಟೋಲ್, ಡೀಸೆಲ್, ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಲಿದೆ. ಸರಕಾರವೇ ಗ್ಯಾರಂಟಿ ಯೋಜನೆಗಳಿಗಾಗಿ ಹಣಕಾಸು ಹೊಂದಿಸಲು ಸಾಮಾನ್ಯ ಜನರ ಸುಲಿಗೆಗೆ ನಿಂತಿದೆ. ಸರ್ಕಾರದ ಬೊಕ್ಕಸ ಬರಿದಾಗಿದೆ ಎಂಬುದು ಇದರಿಂದ ತಿಳಿದು ಬರುತ್ತದೆ, ಕೂಡಲೇ ಶ್ವೇತಪತ್ರ ಬಿಡುಗಡೆಗೊಳಿಸಿ ರಾಜ್ಯದ ಜನರ ಮುಂದೆ ಹಣಕಾಸು ಸ್ಥಿತಿ ತಿಳಿಸಬೇಕು ಎಂದು ಒತ್ತಾಯಿಸಿದರು.ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಎಚ್ಚರಿಸಿದರು.