ಬೆಂಗಳೂರು,ಜೂ.17- ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ನಿರ್ದೇಶನ ನೀಡಿದೆ.
ಗ್ರೂಪ್ ಡಿ ಮತ್ತು ಸಮಾನಾಂತರ ಹುದ್ದೆ ಹಾಗೂ ಗ್ರೂಪ್ ಸಿ ವೃಂದಗಳಲ್ಲಿನ ಬ್ಯಾಕ್‌ಲಾಗ್ ಖಾಲಿ ಹುದ್ದೆ ಸೇರಿದಂತೆ ಯಾವುದೇ ಖಾಲಿ ಹುದ್ದೆಯನ್ನು ಆಯಾ ವರ್ಗಗಳಿಗೆ ಮೀಸಲಾದ ಅಭ್ಯರ್ಥಿಗಳಿಂದಲೇ ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಆದರೆ ಬೆರಳಚ್ಚುಗಾರರು, ದತ್ತಾಂಶ ನಮೂದು ಸಹಾಯಕರು, ವಾಹನ ಚಾಲಕರು, ಶೀಘ್ರ ಲಿಪಿಗಾರರು ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಯಾವುದೇ ಹುದ್ದೆಗಳನ್ನು ಸೃಜನೆ ಮಾಡುವ ಅಥವಾ ಹೆಚ್ಚಿಸುವ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಕಡ್ಡಾಯವಾಗಿದೆ. ಆರ್ಥಿಕ ಇಲಾಖೆ ಯಾವುದೇ ಹುದ್ದೆಯನ್ನು ಮಂಜೂರು ಮಾಡದಿದ್ದರೆ ವಿಶ್ವವಿದ್ಯಾಲಯಗಳು ಮತ್ತು ಇತರ ಸ್ವಾಯತ್ತ ಸಂಸ್ಥೆಗಳ ಮಟ್ಟದಲ್ಲಿ ಸೃಜಿಸಲಾದ ಹುದ್ದೆಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ. ಆರ್ಥಿಕ ಇಲಾಖೆಯು ಇಂತಹ ಹುದ್ದೆಗಳ ಭರ್ತಿಗೆ ಸಹಮತಿ ನೀಡುವುದಿಲ್ಲ. ಅನುದಾನ ಒದಗಿಸಲು ಕ್ರಮ ವಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಆರ್ಥಿಕ ಇಲಾಖೆ ಅನುಮೋದನೆ ಇಲ್ಲದ ಹುದ್ದೆಗಳ ಎದುರಾಗಿ ಉದ್ಭವಿಸುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದಿಲ್ಲ. ಆದರೂ ವಿಶ್ವವಿದ್ಯಾಲಯಗಳು ಮತ್ತು ಇತರ ಸ್ವಾಯತ್ತ ಸಂಸ್ಥೆಗಳು ಇಂತಹ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸುತ್ತಿರುವುದನ್ನು ಗಮನಿಸಲಾಗಿದೆ. ಇಂತಹ ಹುದ್ದೆಗಳನ್ನು ಆರ್ಥಿಕ ಇಲಾಖೆಯ ಸಹಮತಿ ಪಡೆಯದೆ ಬ್ಯಾಕ್‌ಲಾಗ್ ಹುದ್ದೆಗಳೆಂದು ಗುರುತಿಸಿರುತ್ತವೆ.
ಕರ್ನಾಟಕ ಸರ್ಕಾರದ 1977 ರ ನಿಯಮಗಳ ಅನ್ವಯ ಆರ್ಥಿಕ ಇಲಾಖೆಯಿಂದ ಪೂರ್ವಾನುಮತಿ ಪಡೆಯದ ಹುದ್ದೆಗಳ ಎದುರಾಗಿ ಬ್ಯಾಕ್‌ಲಾಗ್ ಹುದ್ದೆ ಸೇರಿದಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶವಿಲ್ಲ. ಯಾವುದೇ ಹುದ್ದೆ ಸೃಜನೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಪೂರ್ವಾನುಮತಿ ಪಡೆಯಬೇಕಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.