ಬೆಂಗಳೂರು,ಜೂ.17- ನೈರುತ್ಯ ಮುಂಗಾರು ದುರ್ಬಲಗೊಂಡ ಪರಿಣಾಮ ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದು, ಗರಿಷ್ಠ ತಾಪಮಾನದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.ಕಳೆದ ವಾರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಒಂದು ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚಾಗಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕನಿಷ್ಟ ತಾಪಮಾನ 21 ಡಿ.ಸೆಂ. ನಷ್ಟಿದ್ದು, ಗರಿಷ್ಠ ತಾಪಮಾನ 31 ಡಿ.ಸೆಂ.ವರೆಗೆ ಇರಲಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿಗಿಂತ ಕಡಿಮೆ ಇರುತ್ತಿತ್ತು. ಅಂದರೆ 27 ರಿಂದ 29 ಡಿ.ಸೆಂ. ವರೆಗೂ ದಾಖಲಾಗುತ್ತಿತ್ತು ಎಂದಿದ್ದಾರೆ.
ಮುಂಗಾರು ದುರ್ಬಲಗೊಂಡಿರುವುದರಿಂದ ವಾತಾವರಣದಲ್ಲಿ ಮಳೆ ತರುವಂತಹ ಯಾವುದೇ ಸನ್ನಿವೇಶಗಳು ಸೃಷ್ಟಿಯಾಗಿಲ್ಲ. ಆದರೆ ನೈರುತ್ಯ ಮತ್ತು ಪಶ್ಚಿಮದ ಕಡೆಯಿಂದ ಬೀಸುವ ತಂಪಾದ ಗಾಳಿಯ ಪರಿಣಾಮದಿಂದ ರಾಜ್ಯದ ಕೆಲವೆಡೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ.
ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಹಗುರ ಮಳೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.