ಬೆಂಗಳೂರು, ಜೂ.17-ಆದಷ್ಟು ಬೇಗ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ತೊಲಗದಿದ್ದರೆ ಮುಂದಿನ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧವನ್ನೇ ಅಡ ಇಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಪಕ್ಷದ ವತಿಯಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಹಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾರ್ಪೋರೇಷನ್ ಕಟ್ಟಡಗಳು , ವಾರ್ಡ್ ಕಚೇರಿ ಅಡ ಇಟ್ಟು ಬ್ಯಾಂಕ್‌ನಿಂದ ಸಾಲ ಪಡೆಯಲು ಇಟ್ಟಿದ್ದಾರೆ. ಇದೇ ಪ್ರವೃತ್ತಿ ಮುಂದುವರೆದರೆ ಸಿಎಂ ಸಿದ್ದರಾಮಯ್ಯನವರು ವಿಧಾನಸೌಧವನ್ನು ಅಡ ಇಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ತಮ ಭಾಷಣದ ವೇಳೆ ಅಶೋಕ್ ಅವರು ಈ ಹಿಂದೆ ಸಿದ್ದರಾಮಯ್ಯನವರು ವಿಪಕ್ಷ ನಾಯಕನಾಗಿದ್ದ ವೇಳೆ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಭಾಷಣದ ವಿಡಿಯೋವನ್ನು ಪ್ರದರ್ಶಿಸಿದರು.
ನಾವು ಅಂದು ಆಡಳಿತದಲ್ಲಿದ್ದಾಗ ಒಂದು ರೂ. ಬೆಲೆ ಹೆಚ್ಚಳ ಮಾಡಿದ್ದಕ್ಕೆ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ್ದರು. ಈಗ ಪೆಟ್ರೋಲ್ ದರವನ್ನು 3 ರೂ. 50 ಪೈಸೆ ಹಾಗೂ ಡೀಸೆಲ್ ದರವನ್ನು 3 ರೂ.ಗೆ ಏರಿಕೆ ಮಾಡಿದ್ದಾರೆ. ಹಾಗಾದರೆ ನಿಮ ಸರ್ಕಾರಕ್ಕೆ ಮಾನಮರ್ಯಾದೆ ಇದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ವಾಲೀಕಿ ಅಭಿವೃದ್ಧಿ ನಿಗಮದ ಹಣ ನುಂಗಿದ ಆರೋಪದಲ್ಲಿ ಸಚಿವ ನಾಗೇಂದ್ರ ಅವರ ಮೊದಲ ವಿಕೆಟ್ ಬಿದ್ದಿದೆ. ಈಗ 2ನೇ ವಿಕೆಟ್ ಬೀಳುವುದೇ ಸಿದ್ದರಾಮಯ್ಯನವರದು. ನಾಗೇಂದ್ರ 20% ಹೊಡೆದರೆ ಸಿದ್ದರಾಮಯ್ಯ 80% ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದರು. 187 ಕೋಟಿ ಹಣವನ್ನು ಹಗಲು ದರೋಡೆ ಮಾಡಿದ್ದಾರೆ. ದಲಿತರ ಹಣ ಬಾರ್‌ಗಳಿಗೆ ಹೋಗಿದೆ. ಎಲ್ಲೆಂದರಲ್ಲಿ ಹಾಡುಹಗಲೇ ಹಿಂದೂಗಳ ಕಗ್ಗೊಲೆಯಾಗುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಇಂತಹ ನುಡಿಮುತ್ತನ್ನು ಹಿಂದೆ ಸಿದ್ದರಾಮಯ್ಯನವರೇ ಹೇಳಿದ್ದರು. ಈಗ ಏಕಾಏಕಿ ಟಾಕಾಟಕ್ ಎಂದು ಬೆಲೆ ಹೆಚ್ಚಳ ಮಾಡಿದ್ದಾರೆಂದು ಕಿಡಿಕಾರಿದರು.
ಮದ್ಯದ ಬೆಲೆ 3 ಸಾವಿರ, ಪೆಟ್ರೋಲ್ ಬೆಲೆ 1800, ಅಗತ್ಯ ವಸ್ತುಗಳ ಬೆಲೆ, ವಿದ್ಯುತ್ ದರವು ಹೆಚ್ಚಳವಾಗಿದೆ, ಸದ್ಯದಲ್ಲೇ ಬಸ್ ದರವೂ ಏರಿಕೆಯಾಗಲಿದೆ. ಕಾಫೀ, ಟೀ ದರವೂ ಹೆಚ್ಚಳವಾಗಿದೆ. ಕಾಂಗ್ರೆಸ್‌ನವರು ಸತ್ತರೆ ತಿಥಿ ವಡೆಯು ಹೇರಿಕೆಯಾಗಲಿದೆ ಎಂದು ವ್ಯಂಗ್ಯವಾಡಿದರು.
ಮಹಾನಗರ ಪಾಲಿಕೆಗಳಲ್ಲಿ ಕಸ ಗುಡಿಸಲು ಪೌರಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ. ಒಂದೇ ಒಂದು ಗುಂಡಿಯನ್ನೂ ಸಹ ಮುಚ್ಚಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಇದೇನಪ್ಪಾ ಶಿವಕುಮಾರ್ ಬ್ರಾಂಡ್ ಬೆಂಗಳೂರು ಎಂದು ಅಶೋಕ್ ಪ್ರಶ್ನಿಸಿದರು.
ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿ ಬಕ್ರೀದ್ ಹಿಂದಿನ ದಿನ ಜನರನ್ನು ಬಕ್ರಾ ಮಾಡಲು ಬೆಲೆ ಏರಿಕೆ ಮಾಡಲಾಗಿದೆ. ಊಸರವಳ್ಳಿಗೂ ನಿಮಗೂ ಸರ್ಧೆ ಮಾಡಿದರೆ ಗೆಲ್ಲೋದು ನೀವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂಗ್ರಹ ಮಾಡಿದ ಹಣವೆಲ್ಲಾ ರಾಹುಲ್ ಗಾಂಧಿಗೆ ಹೋಗುತ್ತಿದೆಕಾಂಗ್ರೆಸ್ ಸರ್ಕಾರವಿರುವ 3 ಕಡೆಯೂ ಜನರಿಗೆ ನಾಮ ಹಾಕ್ತಾರೆ. ಬಕ್ರೀದ್ ದಿನ ಸಿಎಂ ಮಾತ್ರ ಟೋಪಿ ಹಾಕಿಕೊಳ್ಳುತ್ತಾರೆ ಎಂದುಕೊಂಡಿದ್ದೆವು. ಆದರೆ ಇವರು ಎಲ್ಲರಿಗೂ ಟೋಪಿ ಹಾಕಿದ್ದಾರೆ. ಚೊಂಬು ಆದರೂ ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್ ನಾಯಕರು ಕೊಡುವುದು ಹಳೆಯ ಚಿಪ್ಪು. ಚಿಪ್ಪು ಕೂಡ ಮೂರು ತೂತು, ಇವರ ಸರ್ಕಾರವೂ ತೂತು. ಸಂಗ್ರಹ ಮಾಡಿದ ಹಣವೆಲ್ಲಾ ರಾಹುಲ್ ಗಾಂಧಿಗೆ ಹೋಗುತ್ತಿದೆ. ಬೆಲೆ ಇಳಿಸಬೇಕು ಇಲ್ಲಾ ಅವರೇ ಇಳಿಯಬೇಕು. ಇಳಿಯದಿದ್ದರೆ ಹೇಗೆ ಇಳಿಸಬೇಕೆಂದು ನಮಗೆ ಗೊತ್ತಿದೆ. ನುಂಗಣ್ಣ, ನುಂಗಣ್ಣ ಎಂದು ನುಂಗುವ ಕೆಲಸ ಒಂದೇ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಕಿಡಿಕಾರಿದರು.