ನವದೆಹಲಿ,ಜೂ.17-ಕೇಂದ್ರದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಸರ್ಕಾರ, ಸರ್ಕಾರಿ ಉದ್ಯೋಗಿಗಳಿಗೆ ಖಡಕ್ ಸೂಚನೆಯೊಂದನ್ನು ನೀಡಿದೆ. ತಡವಾಗಿ ಕಛೇರಿಗೆ ಬರುವ ಮತ್ತು ಬೇಗ ತೆರಳುವ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.
ಹಲವು ಅಧಿಕಾರಿ/ ಸಿಬ್ಬಂದಿ ಬಯೊಮೆಟ್ರಿಕ್ ಹಾಜರಾತಿ (ಎಇಬಿಎಎಸ್) ವ್‌ಯವಸ್ಥೆಯ ಮೂಲಕ ಹಾಜರಾತಿ ದಾಖಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ, ಈ ಸೂಚನೆ ನೀಡಲಾಗಿದೆ. ಹಲವ ಉದ್ಯೋಗಿಗಳು ನಿಯಮಿತವಾಗಿ ತಡವಾಗಿ ಬರುತ್ತಿರುವುದನ್ನು ಗಮನಿಸಲಾಗಿದೆ.
ಸಂಬಂಧಿಸಿದ ಪ್ರಾಧಿಕಾರಗಳು ಅಧಿಕಾರಿ/ ಸಿಬ್ಬಂದಿಗಳು ಪ್ರತಿದಿನ ತಡವಾಗಿ ಬರುವುದು, ಕಛೇರಿಯಿಂದ ಬೇಗ ತೆರಳುವುದನ್ನು ಗಮನಿಸಿದೆ. ಆದ್ದರಿಂದ ಉದ್ಯೋಗಿಗಳಿಗೆ ಸರಿಯಾದ ಸಮಯದಲ್ಲಿ ಕಛೇರಿಯಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ.
ಮೊಬೈಲ್ ಅಪ್ಲಿಕೇಶನ್ ಆಧಾರಿತ ಹಾಜರಾತಿ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಹಾಜರಾತಿ ಹಾಕಿದ ಲೋಕೇಶನ್‌ನ್ನು ಪತ್ತೆ ಹಚ್ಚಬಹುದು. ಇದರಲ್ಲಿ ಹಲವಾರು ಉದ್ಯೋಗಿಗಳು ನಿರಂತರವಾಗಿ ತಡವಾಗಿ ಬರುತ್ತಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ವ್‌ಯಾಪ್ತಿಗೆ ಒಳಪಡುವ ಎಲ್ಲಾ ಸಚಿವಾಲಯ/ ಇಲಾಖೆ/ ಸಂಸ್ಥೆಗಳು ಬಯೊಮೆಟ್ರಿಕ್ ಹಾಜರಾತಿ (ಎಇಬಿಎಎಸ್) ವ್‌ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿಯಮಿತವಾಗಿ ಅದನ್ನು ಪರಿಶೀಲಿಸಬೇಕು, ಉದ್ಯೋಗಿಗಳು ತಡವಾಗಿ ಬರದಂತೆ ಸೂಚಿಸಬೇಕು ಎಂದು ಹೇಳಿದೆ.
ನಿರಂತರವಾಗಿ ಕಛೇರಿಗೆ ತಡವಾಗಿ ಬರುವ, ಬೇಗನೆ ಕಛೇರಿಯಿಂದ ತೆರಳುವ ಉದ್ಯೋಗಿಗಳ ಹಾಜರಾತಿಯನ್ನು ಸಂಬಂಧಿಸಿದ ಪ್ರಾಧಿಕಾರ ಗಮನಿಸುತ್ತಿದೆ. ಇಂಥವರ ವಿರುದ್ಧ ನಿಯಮಗಳ ಅನ್ವಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.ಎಲ್ಲಾ ಸಿಬ್ಬಂದಿ/ ಅಧಿಕಾರಿಗಳು ತಪ್ಪದೇ ಬಯೊಮೆಟ್ರಿಕ್ ಹಾಜರಾತಿ (ಎಇಬಿಎಎಸ್) ವ್ಯವಸ್ಥೆಯನ್ನು ಬಳಕೆ ಮಾಡಬೇಕಿದೆ.ಎಇಬಿಎಎಸ್ ಹಾಜರಾತಿ ವ್‌ಯವಸ್ಥೆಯಿಂದ ಯಾರೂ ಸಹ ಹೊರಗೆ ಉಳಿಯುವಂತಿಲ್ಲ. ಈ ಕುರಿತು ಸಚಿವಾಲಯಗಳು ಸಹ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
ಸಚಿವಾಲಯ/ ಇಲಾಖೆ/ ಸಂಸ್ಥೆಗಳು ಮುಖ್ಯಸ್ಥರು ಎಇಬಿಎಎಸ್ ವ್‌ಯವಸ್ಥೆಯಲ್ಲಿ ಉದ್ಯೋಗಿಗಳ ಹಾಜರಾತಿ ವರದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಉದ್ಯೋಗಿಗಳು ನಿರಂತರವಾಗಿ ತಡವಾಗಿ ಆಗಮಿಸುತ್ತಿದ್ದರೆ ಅರ್ಧ ದಿನದ ರಜೆ ಕಡಿತ ಮಾಡಬೇಕು ಎಂದು ಆದೇಶದಲ್ಲಿ ವಿವರಣೆ ನೀಡಲಾಗಿದೆ.
ಕಛೇರಿಯಿಂದ ಬೇಗ ನಿರ್ಗಮಿಸುವುದನ್ನು ಸಹ ತಡವಾಗಿ ಬರುವಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ರಜೆಗಳ ಕಡಿತ ಸೇರಿದಂತೆ ಅನೇಕ ಕ್ರಮಗಳನ್ನು ಉದ್ಯೋಗಿಗಳ ವಿರುದ್ಧ ಇರುವ ನಿಯಮದಂತೆ ಕೈಗೊಳ್ಳಲಾಗುತ್ತದೆ ಎಂದು ಆದೇಶ ಎಚ್ಚರಿಸಿದೆ.
ಬಯೊಮೆಟ್ರಿಕ್ ಹಾಜರಾತಿ (ಎಇಬಿಎಎಸ್) ವ್‌ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹೊರತಂದಿರುವ ಮೊಬೈಲ್ ಅಪ್ಲಿಕೇಶನ್ ಆಧಾರಿತ ಹಾಜರಾತಿ ವ್‌ಯವಸ್ಥೆ ಮೂಲಕ ಉದ್ಯೋಗಿಗಳ ಕಚೇರಿಯ ಪ್ರವೇಶ, ನಿರ್ಗಮನ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದೆ.
2023ರ ಜೂನ್ 23 ಆದೇಶದಲ್ಲಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳು ಮುಖ್ಯಸ್ಥರು ಎಇಬಿಎಎಸ್ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಹಾಜರಾತಿ ದಾಖಲಿಸುವುದನ್ನು ಕಡ್ಡಾಯವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಲಾಗಿತ್ತು. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿತ್ತು.
ಈಗ ತಡವಾಗಿ ಕಛೇರಿಗೆ ಬರುವ, ಬೇಗ ನಿರ್ಗಮಿಸುವ ಉದ್ಯೋಗಿಗಳ ಹಾಜರಾತಿ ವರದಿಯನ್ನು ನಿಯಮಿತವಾಗಿ ಪಡೆಯಿರಿ. ಅಂತಹ ಉದ್ಯೋಗಿಗಳಿಗೆ ಮೊದಲು ನೋಟಿಸ್ ನೀಡಿ ಎಂದು ಸಚಿವಾಲಯ/ ಇಲಾಖೆ/ ಸಂಸ್ಥೆಗಳು ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.