ನವದೆಹಲಿ,ಜೂ.18- ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಶೇ.0.001ರಷ್ಟು ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ನಿರ್ದಾಕ್ಷಿಣವಾಗಿ ಕಾನೂನು ಕ್ರಮ ಜರುಗಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.
ನೀಟ್ ಪರೀಕ್ಷೆ ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಇಲ್ಲಿ ಯಾರಾದರೂ ಕಡೆಯಿಂದ ಶೇ.ಶೇ.0.001 ತಪ್ಪು ಇಲ್ಲವೇ ನಿರ್ಲಕ್ಷ್ಯ ವಹಿಸಿರುವ ಕಂಡುಬಂದರೆ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದೆ.
ಪರೀಕ್ಷೆಯನ್ನು ನಡೆಸುವ ಎನ್‌ಟಿಎ ಇರಲಿ ಅಥವಾ ಇನ್ಯಾರೇ ಇರಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ನ್ಯಾಯಯುತವಾಗಿ ವರ್ತಿಸಬೇಕು. ತಪ್ಪಿದ್ದರೆ ಇದು ತಪ್ಪು, ಸರಿ ಇದ್ದರೆ ಸರಿ ಎಂದು ಹೇಳಲು ಮೀನಾಮೇಷವೇಕೆ ಎಂದು ಪ್ರಶ್ನೆ ಮಾಡಿತು. ನೀವು ತೆಗೆದುಕೊಳ್ಳುವ ಒಂದು ನಿರ್ಧಾರ ಕನಿಷ್ಠ ಅದು ನಿಮ ಕಾರ್ಯಕ್ಷಮತೆಯಲ್ಲಿ ವಿಶ್ವಾಸವನ್ನು ಪ್ರೇರೇಪಿಸುತ್ತದೆ.
ದೇಶದ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗೆ ಲಕ್ಷಾಂತರ ವಿದ್ಯಾರ್ಥಿಗಳು ಹಗಲು ರಾತ್ರಿ ಪರಿಶ್ರಮ ಪಟ್ಟಿರುತ್ತಾರೆ. ನಿಮ ಒಂದು ಸಣ್ಣ ತಪ್ಪು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತದೆ. ಮಕ್ಕಳು ಪರೀಕ್ಷೆಗೆ ಯಾವ ರೀತಿ ತಯಾರಾಗುತ್ತಾರೆ ಅವರ ಶ್ರಮ ಎಂಥದ್ದು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ವಿಕ್ರಮ್‌ನಾಥ್ ಹೇಳಿದ್ದಾರೆ.
ಪರೀಕ್ಷೆಯನ್ನು ಮೇ 5ರಂದು ಭಾರತದ 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಜೂನ್ 4ರಂದು ಫಲಿತಾಂಶ ಪ್ರಕಟವಾಗಿತ್ತು. ಆದರೆ, ಫಲಿತಾಂಶ ಪ್ರಕಟವಾದ ನಂತರ 1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿರುವ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಅನುಮಾನ ವ್ಯಕ್ತಪಡಿಸಿದ್ದರು.
ಇದು ರಾಜಕೀಯ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು. ಬಳಿಕ ಗ್ರೇಸ್ ಅಂಕಗಳನ್ನು ಪಡೆದವರಿಗೆ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಸಂಸ್ಥೆ ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಈ ವಿದ್ಯಾರ್ಥಿಗಳಿಗೆ ಜೂ.23ರಂದು ಪರೀಕ್ಷೆಯನ್ನು ಮರುಪಡೆಯಲು ಅನುಮತಿಸಲಾಗುವುದು ಮತ್ತು ಜೂ.30 ರ ಮೊದಲು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.ಎನ್‌ಟಿಎ ಅಧಿಕಾರಿಗಳು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸುವಲ್ಲಿ ಅಕ್ರಮ ಎಸಗಿರುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.