ಬೆಂಗಳೂರು,ಜೂ.19-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಎಸ್‌ಪಿಪಿಯನ್ನು ಬದಲಾವಣೆ ಮಾಡುವ ಪ್ರಸ್ತಾಪವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಎಸ್‌ಪಿಪಿಯನ್ನು ಬದಲಾವಣೆ ಮಾಡಬೇಕಾದರೆ ಕಾನೂನು ಪ್ರಕಾರವೇ ಮಾಡಲಾಗುತ್ತದೆ. ಅದರಲ್ಲಿ ತಪ್ಪೇನಿಲ್ಲ. ಯಾರೇ ಎಸ್‌ಎಸ್‌ಪಿಯಾದರೂ ಕಾನೂನು ಪ್ರಕಾರವಾಗಿ ನಡೆದುಕೊಳ್ಳಬೇಕು ಎಂದರು.
ಬದಲಾವಣೆ ಮಾಡಬೇಕಾದರೆ ಅದಕ್ಕೇನಾದರೂ ಕಾರಣ ಇರುತ್ತದೆ. ನಮಗೂ ಜವಾಬ್ದಾರಿ ಇದೆ. ಕಾನೂನು ಸಲಹೆ ಪಡೆದೇ ತೀರ್ಮಾನ ಕೈಗೊಳ್ಳಲಾಗುವುದು, ಈ ಕೊಲೆ ಕೇಸ್ ಸಡಿಲ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಯಾರ ಪ್ರಭಾವಕ್ಕೊಳಗಾಗದೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ನಟ ದರ್ಶನ್ ಅವರ ಫಾರ್ಮ್ ಹೌಸ್ ಮ್ಯಾನೇಜರ್ ನಾಪತ್ತೆಯಾಗಿರುವ ವಿಚಾರ ಗೊತ್ತಿಲ್ಲ. ಹೊಸದಾಗಿ ಈ ವಿಚಾರ ಪ್ರಸ್ತಾಪವಾಗಿದೆ ಇದರ ಬಗ್ಗೆಯೂ ತನಿಖೆ ಮಾಡಲು ಅಧಿಕಾರಿಗಳು ಅನುಮತಿ ಕೋರಿದರೆ ಸಮತಿಸಲಿದೆ.ಮತ್ತೊಬ್ಬ ಮ್ಯಾನೇಜರ್ ಆತಹತ್ಯೆ ಮಾಡಿಕೊಂಡಿರುವ ವಿಚಾರಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬುದರ ಬಗ್ಗೆ ವಿಚಾರಣೆ ಮಾಡುತ್ತಾರೆ.
ರೇಣುಕಾಸ್ವಾಮಿ ಕುಟುಂಬದ ರೀತಿ ಮ್ಯಾನೇಜರ್ ಕುಟುಂಬದವರಿಗೂ ಅನುಮಾನ ಬಂದಿರಬಹುದು. ಅದರಲ್ಲಿ ಯಾರ ಪಾತ್ರವಿದ್ದರೂ ತನಿಖಯಾಗಲಿದೆ. ಅನುಮತಿ ಕೇಳಿದರೆ ಸರ್ಕಾರ ಅನುಮತಿ ಕೊಡಲಿದೆ ಎಂದರು.ದರ್ಶನ್ ಸ್ವಇಚ್ಚೆ ಹೇಳಿಕೆ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲವೂ ಮಾಧ್ಯಮಗಳಿಗೆ ಗೊತ್ತಾಗಿದೆ. ವಿಚಾರಣೆ ಸಂದರ್ಭದಲ್ಲಿ ಏನೂ ಹೇಳಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ತಿಳಿಸಿದರು.
ಸಾಬೀತುಪಡಿಸಲಿ:
ವಾಲೀಕಿ ಅಭಿವೃದ್ದಿ ನಿಗಮದಲ್ಲಿ ಕೇಳಿಬಂದಿರುವ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡಿರುವುದನ್ನು ಬಿಜೆಪಿಯವರು ಸಾಬೀತುಪಡಿಸಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದ್ದರು. ಬ್ಯಾಂಕ್ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸಿಬಿಐ ಕೂಡ ಪ್ರವೇಶ ಮಾಡಿದ್ದು, ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.