ಬೆಂಗಳೂರು,ಜೂ.20- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಿರುವ ಮಹಿಳೆಯೊಬ್ಬರ ವಿರುದ್ಧ ಜೆಡಿಎಸ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಮಂಗಳ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿಯವರನ್ನು ಕುರಿತು ಅತ್ಯಂತ ಕೀಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಹಿಳೆ ದುರುದ್ದೇಶಪೂರ್ವಕವಾಗಿ ನಿಂದಿಸಿದ್ದಾರೆ ಎಂದು ಜೆಡಿಎಸ್ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್.ಪಿ. ಅವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ನಟ ದರ್ಶನ್ ಅವರ ಮೇಲಿನ ಆರೋಪ ಪ್ರಕರಣಕ್ಕೂ, ಕುಮಾರಸ್ವಾಮಿಯವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಕುಮಾರಸ್ವಾಮಿಯವರ ಹೆಸರನ್ನು ಬಳಸಿ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವುದು ಜೆಡಿಎಸ್ ಪಕ್ಷದ ನಾಯಕರಿಗೆ, ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ.
ಈ ಸಂಬಂಧ ಮಂಗಳ ಮತ್ತು ಅವರ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಅವರು ಕೋರಿದ್ದಾರೆ.