Friday, January 2, 2026
Homeರಾಜ್ಯಶಾಸಕ ಜನಾರ್ದನ ರೆಡ್ಡಿ ಹಾಗೂ , ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಎಫ್‌ಐಆರ್‌

ಶಾಸಕ ಜನಾರ್ದನ ರೆಡ್ಡಿ ಹಾಗೂ , ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಎಫ್‌ಐಆರ್‌

FIR against MLA Janardhana Reddy and former minister Sriramulu

ಬಳ್ಳಾರಿ,ಜ.2-ವಾಲೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್‌ ಅಳವಡಿಕೆ ವಿಚಾರವಾಗಿ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಬ್ರೂಸ್‌‍ಪೇಟೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರಾದ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಹಾಗೂ ಅಲಿಖಾನ್‌, ದಮೂರ ಶೇಖರ್‌, ಮೋತ್ಕರ್‌ ಶ್ರೀನಿವಾಸ್‌‍, ಪ್ರಕಾಶ್‌ ರೆಡ್ಡಿ, ರಮಣ, ಪಾಲನ್ನ, ದಿವಾಕರ್‌ ,ಮಾರುತಿ ಪ್ರಸಾದ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ನಾಳೆ ವಾಲೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮಿಕೊಂಡಿರುವ ಹಿನ್ನಲೆಯಲ್ಲಿ ಹವಂಬಾವಿ ನಗರದಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂಭಾಗ ನಿನ್ನೆ ಸಂಜೆ ಬ್ಯಾನರ್‌ ಅಳವಡಿಕೆ ಮಾಡಲು ಒಂದು ಗುಂಪು ಹೋಗಿತ್ತು.

ಆ ಸಂದರ್ಭದಲ್ಲಿ ಶಾಸಕರ ಮನೆ ಮುಂದೆ ಬ್ಯಾನರ್‌ ಅಳವಡಿಸದಂತೆ ಕೆಲವರು ತಡೆದಿದ್ದಾರೆ. ಇದೇ ಕಾರಣಕ್ಕೆ ಗಲಾಟೆ ಪ್ರಾರಂಭವಾಗಿ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿ ಶಾಸಕ ಭರತ್‌ ರೆಡ್ಡಿ ಬೆಂಬಲಿಗರು ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅದೇ ವೇಳೆಗೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಕಾಂಗ್ರೆಸ್‌‍ ಶಾಸಕ ನಾರಾ ಭರತ್‌ ರೆಡ್ಡಿ ಅವರ ಆಪ್ತ ಸತೀಶ್‌ ರೆಡ್ಡಿ ಬಂದಿದ್ದಾರೆ.

ಈ ಸಂದರ್ಭದಲ್ಲಿ ಎರಡು ಕಡೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಚ್‌ ಮಾಡಿ ಜನರನ್ನು ಚದುರಿಸಿದ್ದಾರೆ.
ಅಷ್ಟಾದರೂ ಕಾರ್ಯಕರ್ತರು ಸ್ಥಳದಿಂದ ಕದಲಲಿಲ್ಲ ಆ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಈ ನಡುವೆಯೇ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್‌ ಮಾಡಿದ್ದರಿಂದ ಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಎಂಬುವವರಿಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ.

ಈ ನಡುವೆ ಯಾರು ಹಾರಿಸಿದ ಗುಂಡಿನಿಂದ ರಾಜಶೇಖರ್‌ ಮೃತಪಟ್ಟಿದ್ದಾರೆಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ.ಅಲ್ಲದೇ ಶಾಸಕ ಭರತ್‌ ರೆಡ್ಡಿ ಬೆಂಬಲಿಗ ಸತೀಶ್‌ ರೆಡ್ಡಿ ಎಂಬುವವರಿಗೂ ಗಂಭೀರ ಗಾಯಗೊಂಡಿದ್ದು,ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.

ಮೃತನ ತಾಯಿಯ ಆಕ್ರಂದನ:
ಬ್ಯಾನರ್‌ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ್‌ ಅವರ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ನಮ ಪಾಡಿಗೆ ನಾವು ಇದ್ದೆವು. ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದೆವು. ಇಲ್ಲಿ ನೋಡಿದರೆ ಈ ರೀತಿಯಾಗಿದೆ ಎಂದು ಶವಗಾರದ ಬಳಿ ಮೃತನ ತಾಯಿ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದರು.

ನಿಷೇದಾಜ್ಞೆ:
ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಜನಾರ್ದನ್‌ ರೆಡ್ಡಿ ಅವರ ಮನೆಯ ಸುತ್ತ 200 ಮೀಟರ್‌ ವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ತನಿಖೆಯಾಗಲಿ:
ಘಟನೆ ಸಂಬಂಧ ಶ್ರೀರಾಮುಲು ಅವರು ಪ್ರತಿಕ್ರಿಯಿಸಿ, ಗಲಾಟೆ ವೇಳೆ ಯಾವ ಗನ್‌ನಿಂದ ಬುಲೆಟ್‌ ಹಾರಿದೆ ಎಂಬುವುದರ ಬಗ್ಗೆ ತನಿಖೆಯಾಗಬೇಕು. ಈಗಿನ ತಂತ್ರಜ್ಞಾನದ ಮೂಲಕ ಅದನ್ನು ಪತ್ತೆಹಚ್ಚಬಹುದಾಗಿದೆ. ಬುಲೆಟ್‌ನ್ನು ಎಫ್‌ಎಸ್‌‍ಎಲ್‌ಗೆ ಕಳುಹಿಸಿ ಕಂಡು ಹಿಡಿಯಲಿ ಎಂದರು.ನಮಗೆ ಹಾಗೂ ಜನಾರ್ದನ ರೆಡ್ಡಿ ಅವರಿಗೆ ಸರ್ಕಾರವೇ ಗನ್‌ಮ್ಯಾನ್‌ ನೀಡಿದೆ. ಅವರ್ಯಾರೂ ಗುಂಡು ಹಾರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಾಸಕರ ಬಂಧನಕ್ಕೆ ಒತ್ತಾಯ:
ಘಟನೆ ಸಂಬಂಧ ಭರತ್‌ ರೆಡ್ಡಿಯವರು ಪ್ರತಿಕ್ರಿಯಿಸಿ, ಶಾಸಕ ಜನಾರ್ದನ ರೆಡ್ಡಿ ಅವರ ಬೆಂಬಲಿಗರು ಮಾಡಿದ ಗಲಾಟೆಯಲ್ಲಿ ನಮ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಜನಾರ್ದನ ರೆಡ್ಡಿ ಹಾಗೂ ಅವರ ಬೆಂಬಲಿಗರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ವಾಲೀಕಿ ಕಾರ್ಯಕ್ರಮವನ್ನು ತಡೆಯಲು ಕಳೆದ ಒಂದು ತಿಂಗಳಿನಿಂದ ಕೆಲವರು ಪ್ರಯತ್ನಿಸುತ್ತಿದ್ದರು. ಇದೀಗ ಗಲಾಟೆ ಮಾಡಿ ಕಾರ್ಯಕ್ರಮ ನಿಲ್ಲಿಸಲು ಮುಂದಾಗಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News