ವಾಷಿಂಗ್ಟನ್, ಜೂ.21– ಅತ್ಯಾಚಾರ ಸಂತ್ರಸ್ತೆಗೆ 900 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕೋಕಾ-ಕೋಲಾ ಕಂಪನಿ ಉತ್ತರಾಧಿಕಾರಿ ಅಲ್ಕಿ ಡೇವಿಡ್ ಅವರಿಗೆ ಲಾಸ್ ಏಂಜಲೀಸ್ ನ್ಯಾಯಲಯ ಆದೇಶ ಹೊರಡಿಸಿದೆ.
ಕೋಕಾ-ಕೋಲಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಜೇನ್ ಡೋ ಎಂಬ ಹೆಸರಿನ ಮಹಿಳೆಯು ಅಲ್ಕಿ ಡೇವಿಡ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಳು. 2016 ಮತ್ತು 2019 ರ ನಡುವೆ ಮೂರು ವರ್ಷಗಳ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಈಗ ತೀರ್ಪು ಪ್ರಕಟಿಸಿದೆ. ಅತ್ಯಾಚಾರ ಸಂತ್ರಸ್ತೆಗೆ ದೊಡ್ಡ ಮೊತ್ತದ ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ. ಇದು ಇತಿಹಾಸದಲ್ಲಿ ಅತೀ ದೊಡ್ಡ ಪರಿಹಾರದ ಶಿಕ್ಷೆಯಾಗಿದೆ ಎಂದು ಆಕೆಯ ವಕೀಲರು ಬಣ್ಣಿಸಿದ್ದಾರೆ.
ಹಿಂದೆ 2019 ರಲ್ಲಿ ಮಾಜಿ ಪೊಡಕ್ಷನ್ ಅಸಿಸ್ಟೆಂಟ್ ಮಹಿಮ್ ಖಾನ್ ಎಂಬುವರು ಕೂಡ ಡೇವಿಡ್ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲೂ ನ್ಯಾಯಾಲಯ ಈತನಿಗೆ 58 ಮಿಲಿಯನ್ ಡಾಲರ್ ದಂಡ ಹಾಕಿತ್ತು. ಅದನ್ನು ಸಂತ್ರಸ್ತೆಗೆ ನೀಡಲು ಸೂಚಿಸಿತ್ತು.
ಜೊತೆಗೆ ಮತ್ತೊಮೆ ಇಂತಹ ಕತ್ಯಗಳನ್ನು ನಡೆಸದಂತೆ ಎಚ್ಚರಿಕೆ ನೀಡಿತ್ತು. ಆದರೂ ಅವರು ಮತ್ತೆ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವುದನ್ನು ನ್ಯಾಯಲಯ ಗಂಭೀರವಾಗಿ ಪರಿಗಣಿಸಿ ಭಾರಿ ಮೊತ್ತದ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.