Monday, November 25, 2024
Homeರಾಜಕೀಯ | Politicsಕುತೂಹಲ ಕೆರಳಿಸಿದೆ ಚನ್ನಪಟ್ಟಣ ಉಪಚುನಾವಣೆ ಕುರಿತ ಡಿಕೆಶಿ ಹೇಳಿಕೆ

ಕುತೂಹಲ ಕೆರಳಿಸಿದೆ ಚನ್ನಪಟ್ಟಣ ಉಪಚುನಾವಣೆ ಕುರಿತ ಡಿಕೆಶಿ ಹೇಳಿಕೆ

ಬೆಂಗಳೂರು, ಜೂ.21- ಜನ ಬಯಸಿದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ವಿಧಿ ಇಲ್ಲದೆ ತಾವೇ ಅಭ್ಯರ್ಥಿಯಾಗುವುದಾಗಿ ಹೇಳಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಇಂದು ಬೇರೆ ರೀತಿಯ ಮಾತುಗಳ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಅಂತಾರಾಷ್ಟ್ರೀಯ 10ನೇ ಯೋಗ ದಿನಾಚರಣೆಯ ಅಂಗವಾಗಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕನಕಪುರದಲ್ಲಿ ಶಾಸಕನಾಗಿದ್ದೇನೆ. ಪಕ್ಷದ ಅಧ್ಯಕ್ಷ, ಜವಾಬ್ದಾರಿ ಇದೆ. ಎಲ್ಲಾ ಕ್ಷೇತ್ರಗಳು ನನ್ನವು. ನನ್ನದೇ ಮುಖಂಡತ್ವ. ನನ್ನದೇ ನಾಯಕತ್ವ. ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೊತೆಯಾಗಿ ಉಪ ಚುನಾವಣೆ ನಡೆಸುತ್ತೇವೆ ಎಂದರು.

ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದರೆ ಕನಕಪುರ ಕ್ಷೇತ್ರ ಖಾಲಿಯಾಗಬಹುದು. ಆಗ ಮತ್ತೊಂದು ಉಪಚುನಾವಣೆ ನಡೆದರೆ ದೇಶದ ಸಂಪತ್ತು ಅನಗತ್ಯ ವೆಚ್ಚವಾಗುತ್ತದೆ ಎಂದು ಮಾಜಿ ಸಚಿವ ಬಿಜೆಪಿಯ ಎಸ್‌‍.ಸುರೇಶ್‌ ಕುಮಾರ್‌ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಯವರು, ಕನಕಪುರಕ್ಕೆ ಉಪಚುನಾವಣೆ ಏಕೆ ಬರುತ್ತದೆ ಎಂದು ಮರು ಪ್ರಶ್ನಿಸಿದರು. ನನ್ನ ಜಿಲ್ಲೆ, ನನ್ನದೇ ನಾಯಕತ್ವ ಎಂದು ಹೇಳುವ ಮೂಲಕ ಬದಲಿ ಅಭ್ಯರ್ಥಿಯ ಸುಳಿವು ನೀಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಿಂದ ಹಿಂದೆ ಸರಿದು ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆಯೇ ? ಉಪಚುನಾವಣೆಯಲ್ಲಿ ತಾವೇ ಅಭ್ಯರ್ಥಿ ಎಂದು ಪ್ರಚಾರ ಮಾಡಿ, ಗೆಲ್ಲುವ ತಂತ್ರ ಅನುಸರಿಸಿದ್ದಾರೆಯೇ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

ಕಳೆದ ಎರಡು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್‌ ನೀಡಿದ್ದ ಹೇಳಿಕೆಯಲ್ಲಿ ಚನ್ನಪಟ್ಟಣದಲ್ಲಿ ತಾವೇ ಅಭ್ಯರ್ಥಿಯಾಗುವ ಅರ್ಥದಲ್ಲಿ ಮಾತನಾಡಿದರು. ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿ ಗೆದ್ದರೆ, ಕನಕಪುರ ಕ್ಷೇತ್ರ ತೆರವಾಗಲಿದೆ. ಅಲ್ಲಿ ಮಾಜಿ ಸಂಸದ ಹಾಗೂ ಸಹೋದರ ಡಿ.ಕೆ.ಸುರೇಶ್‌ರನ್ನು ಅಭ್ಯರ್ಥಿ ಮಾಡಲಿದ್ದಾರೆ ಎಂಬ ಚರ್ಚೆಗಳಿದ್ದವು. ಈಗ ಡಿ.ಕೆ.ಶಿವಕುಮಾರ್‌ ನನ್ನದೆ ನಾಯಕತ್ವ ಎಂದು ಹೇಳುವ ಮೂಲಕ ಚರ್ಚೆಯ ಆಯಾಮವನ್ನು ಬದಲು ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದರೆ ಅವರ ರಾಜಕೀಯ ಜೀವನ ಅಂತ್ಯವಾಗಲಿದೆ ಎಂದು ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ ರಾಜಕೀಯ ಭವಿಷ್ಯ ತೀರ್ಮಾನಿಸುವುದು ಜನ. ಯೋಗೇಶ್ವರ್‌ ದೊಡ್ಡವರು, ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಅದಕ್ಕೆ ನನಗೆ ಸಮಯವೂ ಇಲ್ಲ ಎಂದರು.

ನಾನು ಆ ಜಿಲ್ಲೆಯವನು, ನನಗೆ ಶಕ್ತಿ ಕೊಡಿ, ನಿಮ ಋಣತೀರಿಸುತ್ತೇನೆ ಎಂದು ಮತದಾರರಲ್ಲಿ ಕೇಳಿಕೊಂಡಿದ್ದೇನೆ. ವಿಶ್ವಾಸ ಇದ್ದರೆ ಬೆಂಬಲಿಸುತ್ತಾರೆ. ನನ್ನ ಹಿಂದೆ ಒಂದು ಶಕ್ತಿ ಇದೆ. ಅದು ಮತ್ತು ಜನ ನನ್ನ ರಾಜಕೀಯ ಅಂತ್ಯ ಬರೆಯುತ್ತಾರೆಯೇ ಹೊರತು ಬೇರೆಯವರಲ್ಲ ಎಂದು ತಿರುಗೇಟು ನೀಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ಹೊರತು ಪಡಿಸಿ ಬೇರೆಯವರು ಗೆಲ್ಲಲು ಸಾಧ್ಯವಿಲ್ಲ ಎಂದು ಕೊಂಡಿದ್ದರು. ಈಗ ಏನಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಲೇವಡಿ, ಅವರು ದೊಡ್ಡವರು ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಜಾರಿಕೊಂಡರು.

RELATED ARTICLES

Latest News