ಬೆಂಗಳೂರು,ಜ.2-ಶಾಸಕ ಜನಾರ್ಧನ ರೆಡ್ಡಿಯನ್ನು ಗುರಿಯಾಗಿಟ್ಟುಕೊಂಡು ಗುಂಡು ಹಾರಿಸಲಾಗಿದೆ. ಈ ಗಲಭೆಗೆ ಕಾರಣೀಭೂತರಾದ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಆಪ್ತನನ್ನು ತಕ್ಷಣವೇ ಸರ್ಕಾರ ಬಂಧಿಸಿ ಜೈಲಿಗೆ ಹಾಕಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಬಳ್ಳಾರಿಯಲ್ಲಿ ಕಳೆದ ರಾತ್ರಿ ನಡೆದ ಗಲಭೆಗೆ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಹಾಗೂ ಬೆಂಬಲಿಗರು ಕಾರಣಕರ್ತರು ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ. ರಾಜಕೀಯವಾಗಿ ಬೆಳೆಯುತ್ತಿರುವ ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ ಎಂದು ದೂರಿದರು.
ವಿಧಾನಸೌಧದಲ್ಲಿ ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರೆಡ್ಡಿ ಅವರನ್ನು ಗುರಿಯಾಗಿಟ್ಟುಕೊಂಡು ಗುಂಡು ಹಾರಿಸಲಾಗಿತ್ತು. ಆದರೆ ಅದು ಕಾಂಗ್ರೆಸ್ ಕಾರ್ಯಕರ್ತನಿಗೆ ತಗಲಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಆರೋಪ ಮಾಡಿದರು.
ಬಳ್ಳಾರಿಯಲ್ಲಿ ವ್ಯಕ್ತಿ ಸಾವಿಗೆ ಭರತ್ ರೆಡ್ಡಿಯೇ ಕಾರಣ. ತಕ್ಷಣವೇ ಸರ್ಕಾರ ಗೂಂಡಾ ಕಾಯ್ದೆಯಡಿ ಅವರನ್ನು ಬಂಧಿಸಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ನ್ಯಾಯಾಂಗ ತನಿಖೆ ನಡೆಸಬೇಕು. ಜೊತೆಗೆ ರೆಡ್ಡಿ ಮತ್ತು ರಾಮುಲುಗೆ ಸರ್ಕಾರ ರಕ್ಷಣೆ ಕೊಡಬೇಕೆಂದು ಮನವಿ ಮಾಡಿದರು.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ಮೇಲೆ ಗುಂಡಿನ ದಾಳಿ ಆಗಿದೆ. ಫೈರಿಂಗ್ ಆಗಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದನ್ನು ತೋರಿಸುತ್ತದೆ. ಆಂಧ್ರದ ರಕ್ತಚರಿತ್ರೆ ಬಳ್ಳಾರಿಗೂ ಕಾಲಿಟ್ಟಿದೆ. ಸಿದ್ದರಾಮಯ್ಯ ಆಗ ತೊಡೆ ತಟ್ಟಿ ಬಳ್ಳಾರಿ ರಿಪಬ್ಲಿಕ್ ಅಂದಿದ್ದರು. ಈಗ ಬಳ್ಳಾರಿ ಕಾಂಗ್ರೆಸ್ ರಿಪಬ್ಲಿಕ್ ಆಗಿದೆಯಾ? ಎಂದು ಪ್ರಶ್ನಿಸಿದರು.
ನಿನ್ನೆ ರಾತ್ರಿ ರೆಡ್ಡಿಯವರ ಮನೆ ಮುಂದೆ ಗುಂಪು ಕಟ್ಟಿಕೊಂಡು ಬಂದಿದ್ದರು. ಸತೀಶ್ ರೆಡ್ಡಿ, ಜನಾರ್ದನ ರೆಡ್ಡಿ ಮನೆ ಮುಂದೆನೇ ಕಾಲು ಮೇಲೆ ಕಾಲು ಹಾಕಿ ಕೂತು ಬ್ಯಾನರ್ ಕಟ್ಟಿಸುತ್ತಿದ್ದ. ಕಾಂಗ್ರೆಸ್‌ನವರೇ ಗುಂಡು ಹಾರಿಸಿ ಜನಾರ್ದನ ರೆಡ್ಡಿ ಮೇಲೆ ಹಾಕಿದ್ದಾರೆ. ಜನಾರ್ದನ ರೆಡ್ಡಿ ಮೇಲೆ ಹಲ್ಲೆ ಮಾಡಬೇಕು, ಹತ್ಯೆ ಮಾಡಬೇಕು ಅಂತಾನೆ ಕಾಂಗ್ರೆಸ್‌ನವರು ಬಂದಿದ್ದರು. ಇದು ಪೂರ್ವಯೋಜಿತ ಕೃತ್ಯ ಎಂದು ದೂರಿದರು.
ಕಾಂಗ್ರೆಸ್‌ನವರೇ ಹತ್ಯೆಗೆ ಯತ್ನ ಮಾಡಿದ್ದಾರೆ. ಆ ವ್ಯಕ್ತಿ ಸಾವನ್ನು ರೆಡ್ಡಿ ತಲೆ ಮೇಲೆ ಹಾಕುತ್ತಿದ್ದಾರೆ. ಈಗ ಮಿಸ್ ಫೈರ್ ಅಂತಿದ್ದಾರೆ. ಇಲ್ಲಿಂದಲೂ ಕಾಲ್ ಹೋಗಿರಬೇಕು, ಮಿಸ್‌ಫೈರ್ ಎಂದು ಹೇಳಲಿಕ್ಕೆ. ರಾಜ್ಯದಲ್ಲಿ ಸಿಎಂ ಇದ್ದಾರಾ? ಇಲ್ವಾ? ಎಂದು ಪ್ರಶ್ನಿಸಿದರು. ಗುಂಡು ಹಾರಿಸುವ ಸಂಪ್ರದಾಯಕ್ಕೆ ಸಿಎಂ ಪ್ರೋತ್ಸಾಹ ಕೊಟ್ಟಂತಿದೆ. ಗೂಂಡಾ ರಾಜ್ಯ ಮಾಡುತ್ತಿದ್ದಾರೆ. ರಾಜಕೀಯವಾಗಿ ಗುಂಡು ಹಾರಿಸುವುದು ನಡೆದಿಲ್ಲ. ಹೊಸ ರಕ್ತ ಚರಿತ್ರೆಗೆ ಸಿಎಂ ನಾಂದಿ ಹಾಡಿದ್ದಾರೆ. ಕಾಂಗ್ರೆಸ್‌ನವರು ಗೂಂಡಾಗಿರಿ ಮಾಡುತ್ತಿದ್ದಾರೆ. ಜನಾರ್ದನ ರೆಡ್ಡಿ ಮೇಲಿನ ಫೈರಿಂಗ್‌ನ್ನು ಖಂಡಿಸುತ್ತೇವೆ ಎಂದರು.
ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಈ ಗೂಂಡಾ ಸಂಸ್ಕೃತಿ ಬೇರೆ ಜಿಲ್ಲೆಗೆ ಕಾಲಿಡದಂತೆ ನೋಡಿಕೊಳ್ಳಬೇಕು. ಜನಾರ್ದನ ರೆಡ್ಡಿ ಮನೆ ಬಳಿಗ ಏಕೆ ಕಾಂಗ್ರೆಸ್‌ನವರು ಹೋಗಬೇಕಿತ್ತು?ಪೊಲೀಸರು ಬಂದರೂ ಯಾಕೆ ಗೂಂಡಾಗಳು ಹೋಗಲಿಲ್ಲ? ಎಂದು ಪ್ರಶ್ನಿಸಿದರು.
ಏನೂ ಇಲ್ಲದೇ ಜನಾರ್ದನ ರೆಡ್ಡಿ ಮೇಲೆ ಯಾಕೆ ದೂರು ದಾಖಲಾಗಿದೆ. ನಮ ರಾಜ್ಯ ನಾಯಕ ಶ್ರೀರಾಮುಲು ಅವರನ್ನೂ ಗೂಂಡಾಗಳು ತಳ್ಳಿದ್ದಾರೆ. ಬಳ್ಳಾರಿ ರಕ್ತ ಚರಿತ್ರೆಯಿಂದ ಈ ವರ್ಷ ಪ್ರಾರಂಭವಾಗಿದೆ ಎಂದರು. ಈ ಘಟನೆ ಶುರುವಾದಾಗ ರೆಡ್ಡಿಯವರು ಮನೆಯಲ್ಲಿ ಇರಲೇ ಇಲ್ಲ. ಸತೀಶ್ ರೆಡ್ಡಿ, ಭರತ್ ರೆಡ್ಡಿ ಹಿನ್ನೆಲೆಯೇ ಅಪರಾಧ ಹಿನ್ನೆಲೆಯದ್ದು ಮೊದಲಿಂದಲೂ ಗಲಾಟೆ ದೊಂಬಿಯಲ್ಲೇ ಭಾಗವಹಿಸಿಕೊಂಡು ಬಂದವರು ಅಶೋಕ್ ಆರೋಪಿಸಿದರು.
ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಭರತ್ ರೆಡ್ಡಿ ಕಡೆಯಿಂದ ಗಲಭೆ ಶುರುವಾಗಿದೆ. ಬ್ಯಾನರ್ ಕಟ್ಟುವಾಗ ಮನೆಯಲ್ಲಿ ರೆಡ್ಡಿಯವರು ಇರಲೇ ಇಲ್ಲ. ಶ್ರೀರಾಮುಲು ಅವರು ಬಂದು ಕೇಳುತ್ತಾರೆ. ನಂತರ ಪೊಲೀಸರು ಬ್ಯಾನರ್ ತೆರವು ಮಾಡುತ್ತಾರೆ. ಬಳಿಕ ಸತೀಶ್ ರೆಡ್ಡಿ ಕುರ್ಚಿಯಲ್ಲಿ ಕೂತು ಬ್ಯಾನರ್ ಕಟ್ಟಿಸುತ್ತಾನೆ. ಇದು ದೂಂಡಾವರ್ತನೆ ಅಲ್ಲವೇ? ಈರೀತಿ ಮಾಡಿದ ಮೇಲೆ ಗಲಭೆ ವಿಕೋಪಕ್ಕೆ ಹೋಯಿತು. ಶ್ರೀರಾಮುಲು ಕೇಳಲು ಹೋಗಿದ್ದರೆ ಅವರನ್ನೂ ತಳ್ಳಿದ್ದಾರೆ. ಗಲಭೆ ಮಾಡಲೆಂದೇ ಪೂರ್ವನಿಯೋಜನೆ ಮಾಡಿಕೊಂಡು ಕಾಂಗ್ರೆಸ್‌ನವರು ಹೋಗಿದ್ದರು ಎಂದು ಕಿಡಿಕಾರಿದರು.
ದೂರು ಯಾರ ಮೇಲೆ ದಾಖಲಾಗಬೇಕಿತ್ತು? ರೆಡ್ಡಿ, ರಾಮುಲು ಗುಂಡು ಹಾರಿಸಿದ್ದರಾ? ಅವರಿಗೆ ಸಂಬಂಧವೇ ಇಲ್ಲ. ರೆಡ್ಡಿ, ರಾಮುಲು ಟಾರ್ಗೆಟ್ ಮಾಡಿ ದೂರು ದಾಖಲಿಸಿದ್ದಾರೆ. ಇನ್ನೂ ಕಾಂಗ್ರೆಸ್‌ನ ಯಾರನ್ನೂ ಬಂಧಿಲ್ಲ, ಅಂದರೆ ಇದು ಸರ್ಕಾರದ ಪ್ರಾಯೋಜಕತ್ವದ ದಾಳಿಯೇ ಎಂದು ವಾದಿಸಿದರು.
ಈ ಗಲಭೆ ನಡೆದಿದ್ದು ಕಾಂಗ್ರೆಸ್‌ನಿಂದಲೇ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮಾತ್ರ ಅಲ್ಲ, ವಿಕೋಪಕ್ಕೆ ಹೋಗಿದೆ. ಇದು ಸರ್ಕಾರಿ ಪ್ರಾಯೋಜಕತ್ವದ ದಾಳಿ. ರೆಡ್ಡಿ ಅವರು ಫೈರಿಂಗ್‌ನಿಂದ ಬಚಾವ್ ಆದರು. ಇಲ್ಲದಿದ್ದರೆ ರೆಡ್ಡಿಯವರ ದೇಹ ಅಲ್ಲಿರುತ್ತಿತ್ತು.
