ಬೆಂಗಳೂರು,ಜ.2- ಕಳೆದ ರಾತ್ರಿ ಬಳ್ಳಾರಿಯ ಹಾವಂಭಾವಿ ಬಳಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ದೇಹದೊಳಗೆ ಒಳ ಹೊಕ್ಕಿರುವುದು ಪೊಲೀಸ್ ಬುಲೆಟ್ ಅಲ್ಲ ಎಂದು ಜಿಲ್ಲಾ ಎಸ್‌ಪಿ ಪವನ್ ನೆಚ್ಚೂರು ಸ್ಪಷ್ಟಪಡಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ದೇಹ ಹೊಕ್ಕಿದ್ದು ಖಾಸಗಿ ರಿವಾಲ್ವರ್‌ನ ಬುಲೆಟ್. ಗಲಾಟೆ ವೇಳೆ ರಾಜಶೇಖರ್ ಎಂಬುವವರ ಸಾವಾಗಿದೆ. ಪೊಲೀಸರು ಫೈರ್ ಮಾಡಿದಾಗ ತಗುಲಿರುವ ಬುಲೆಟ್ ಅಲ್ಲ. ಆದರೆ ಅದು ಖಾಸಗಿ ರಿವಾಲ್ವಾರ್ ಬುಲೆಟ್ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸಿಸಿ ಕ್ಯಾಮೆರಾಗಳ ಪರಿಶೀಲನೆ ಮಾಡುತ್ತಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಭರತ್ ರೆಡ್ಡಿ ಬೆಂಬಲಿಗರು ನಾಲ್ಕು ಪ್ರಕರಣಗಳು ದಾಖಲಿಸಿದ್ದಾರೆ. ಖಾಸಗಿ ವ್ಯಕ್ತಿ ಫೈರ್ ಮಾಡಿರೋ ಬಗ್ಗೆ ಪರಿಶೀಲಿಸುತ್ತೇವೆಂದು ಅವರು ಹೇಳಿದರು.
ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಬಳಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಗಲಾಟೆ ನಡೆದು ಫೈರಿಂಗ್ ಆಗಿದೆ. ಬಿಜೆಪಿ -ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿಯಾಗಿ ಫೈರಿಂಗ್ ನಡೆದಿದೆ ಎಂದು ಅವರು ವಿವರಿಸಿದರು.
ಬಿಗಿ ಭದ್ರತೆ:
ಘಟನಾ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಯಿಂದಲೂ ಹೆಚ್ಚುವರಿ ಪೊಲೀಸರನ್ನು ನಗರಕ್ಕೆ ಕರೆಸಿಕೊಂಡಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಮೂವರು ಹೆಚ್ಚುವರಿ ಎಸ್‌ಪಿಗಳ ನೇತೃತ್ವದಲ್ಲಿ 10 ಮಂದಿ ಡಿವೈಎಸ್‌ಪಿ, ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಹಾಗೆಯೇ ಡಿಎಆರ್, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ಬೀಡು ಬಿಟ್ಟಿವೆ. ಕೆಲ ಕಾಲ ಬಳ್ಳಾರಿ ನಗರದ ಕುರ್ರೆಟ್ಟಿ ಪ್ರದೇಶದಿಂದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಬಳಿಕ ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
