Friday, November 22, 2024
Homeಇದೀಗ ಬಂದ ಸುದ್ದಿನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್‌ಪಿನ್‌ಗಾಗಿ ಬಿಹಾರ ಪೊಲೀಸರ ತೀವ್ರ ಹುಡುಕಾಟ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್‌ಪಿನ್‌ಗಾಗಿ ಬಿಹಾರ ಪೊಲೀಸರ ತೀವ್ರ ಹುಡುಕಾಟ

ನವದೆಹಲಿ,ಜೂ.22- ನೀಟ್‌ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಕಿಂಗ್‌ಪಿನ್‌ ಸಂಜೀವ್‌ ಕುಮಾರ್‌ ಅಲಿಯಾಸ್‌‍ ಸಂಜೀವ್‌ ಮುಖಿಯಾಗಾಗಿ ಬಿಹಾರ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಸಂಜೀವ್‌ ಮುಖಿಯಾ ಮೂಲತಃ ನಳಂದದ ನಾಗರನೌಸಾ ನಿವಾಸಿ ಆಗಿದ್ದು, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತ ತಲೆಮರೆಸಿಕೊಂಡಿದ್ದಾನೆ.

ಸಂಜೀವ್‌ ಕಳೆದ ಎರಡು ದಶಕಗಳಿಂದ ವಿವಿಧ ಸ್ಪರ್ಧಾತಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಸೋರಿಕೆ ದಂಧೆಯಲ್ಲಿ ತೊಡಗಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಇತ್ತೀಚೆಗೆ ಬಿಹಾರದಲ್ಲಿ ಮುಕ್ತಾಯಗೊಂಡ ಶಿಕ್ಷಕರ ಮರು ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸೋರಿಕೆ ಪ್ರಕರಣದಲ್ಲೂ ಸಂಜೀವ್‌ ಮುಖಿಯಾ ಅವರ ಪುತ್ರ ಡಾ.ಶಿವಕುಮಾರ್‌ ಕೂಡ ಭಾಗಿಯಾಗಿ ಸದ್ಯ ಬಂಧನದಲ್ಲಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ನಂತದ ಆರ್ಥಿಕ ಅಪರಾಧಗಳ ಘಟಕ (ಇಒಯು) 279 ಆರೋಪಿಗಳನ್ನು ಬಂಧಿಸಿ 68 ದಿನಗಳ ಕಾಲ ತೀವ್ರ ತನಿಖೆ ನಡೆಸಿದ ಬಳಿಕ ಆರೋಪಿ ಶಿವಕುಮಾರ್‌ನನ್ನು ಜೈಲಿಗೆ ಕಳುಹಿಸಿದ್ದರು.

2010ರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯಲ್ಲಿ ತೊಡಗಿರುವ ಸಂಜೀವ್‌ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತ ತನ್ನದೇ ಆದ ಗ್ಯಾಂಗ್‌ಅನ್ನು ಮಾಡಿಕೊಂಡು ದಂಧೆ ನಡೆಸುತ್ತಿರುವುದಾಗಿ ಬಿಹಾರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇತ್ತೀಚೆಗಷ್ಟೇ ಸಂಜೀವ್‌ ಮುಖಿಯಾ ಮತ್ತವನ ಗ್ಯಾಂಗ್‌ನಿಂದ ಬಿಪಿಎಸ್‌‍ಸಿ (ಬಿಹಾರ ಲೋಕಸೇವಾ ಆಯೋಗ) ಪರೀಕ್ಷೆಯ ಪತ್ರಿಕೆಯೂ ಸೋರಿಕೆಯಾಗಿತ್ತು ಎಂಬ ಆರೋಪ ಇದೆ.

ದೇಶಾದ್ಯಂತ ನೆಟ್‌ವರ್ಕ್‌:
ಸಂಜೀವ್‌ ಮುಖಿಯಾ ಅನೇಕ ಪೇಪರ್‌ ಸೋರಿಕೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ಅವರ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತಿದೆ. ಈತ ದೇಶಾದ್ಯಂತ ನೆಟ್‌ವರ್ಕ್‌ ಹೊಂದಿದ್ದು, ತಮ್ಮ ಗ್ರೂಪ್‌ ಸದಸ್ಯರಿಂದ ಕಳೆದ 20 ವರ್ಷಗಳಿಂದ ದಂಧೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜಕೀಯದಲ್ಲೂ ಸಕ್ರಿಯ:
ಸಂಜೀವ್‌ ಮುಖಿಯಾ ಹಣ ಬಲದ ಮೇಲೆ ತಮ್ಮ ರಾಜಕೀಯದಲ್ಲೂ ಸಕ್ರಿಯನಾಗಿದ್ದಾನೆ ಎನ್ನಲಾಗುತ್ತಿದೆ. ಸದ್ಯ ನೀಟ್‌ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಆರೋಪಿ ಸಂಜೀವ್‌ ಮುಖಿಯಾಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಇದೂ ವರೆಗೂ 14 ಜನರನ್ನು ಬಿಹಾರ ಪೊಲೀಸರು ಬಂಧಿಸಿದ್ದು, ಇವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

RELATED ARTICLES

Latest News