ಬೆಂಗಳೂರು,ಜೂ.22- ಇನ್ನು ಮುಂದಾದರೂ ಪಕ್ಷದಲ್ಲಿ ಕೆಲಸ ಮಾಡುವವರನ್ನು ಗುರುತಿಸಿ, ಸಂಘಟನೆ ಮಾಡದೆ ಇರುವವರನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಬೇಕೆಂದು ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ವೇದಿಕೆಯಲ್ಲೇ ಕಟ್ಟುನಿಟ್ಟಿನ ಸೂಚನೆ ನೀಡಿದ ಪ್ರಸಂಗ ಜರುಗಿತು.
ನಗರದ ಅರಮನೆ ಮೈದಾನದಲ್ಲಿ ಪಕ್ಷದ ವತಿಯಿಂದ ಹಮಿಕೊಂಡಿದ್ದ ನೂತನ ಸಂಸದರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲಸ ಮಾಡುವವರನ್ನು ಪಕ್ಷ ಗುರುತಿಸಬೇಕು. ಕೆಲಸವನ್ನೇ ಮಾಡದೆ ನಾಯಕರ ಹಿಂದೆ ಸುತ್ತಾಡುವವರು ಇದ್ದರೂ ಒಂದೇ ಬಿಟ್ಟರೂ ಒಂದೇ ಎಂದು ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು.
ಕಳೆದ ಮೂರು ದಶಕಗಳಿಂದ ದಾವಣಗೆರೆ ಬಿಜೆಪಿಯ ಭದ್ರಕೋಟೆಯಾಗಿತ್ತು. ಇಲ್ಲಿ ನಾವು ಕೆಲವೇ ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ. ಇದಕ್ಕೆ ಯಾರು ಕಾರಣ ಎಂಬುದು ಮುಖ್ಯವಲ್ಲ. ನಮ ಸೋಲಿಗೆ ಆತಾವಲೋಕನ ಮಾಡಿಕೊಳ್ಳಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.
ಯಾರು, ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ರಾಜ್ಯಾಧ್ಯಕ್ಷರು ಅವಲೋಕಿಸಬೇಕು. ಯಾರೋ ಮಾಡಿದ ಪಾಪಕ್ಕೆ ಯಾರನ್ನೋ ಗುಡಿ ಮಾಡಬೇಡಿ ಎಂದು ವಿಜಯೇಂದ್ರಗೆ ಮನವಿ ಮಾಡಿದರು. ತುಮಕೂರಿನಲ್ಲಿ ಸೋಮಣ್ಣ ಸೋಲುತ್ತಾರೆಂದು ಎಲ್ಲರೂ ಅಪಪ್ರಚಾರ ಮಾಡಿದರು. ನಾನು ಯಾವುದಕ್ಕೂ ದೃತಿಗೆಡದೆ ಎರಡೂ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿದೆ ಎಂದು ಹೇಳಿದರು.
ಜೆಡಿಎಸ್‌ಗೆ ಬಹುಪರಾಕ್: ಇನ್ನು ಸೋಮಣ್ಣ ತಮ ಭಾಷಣದಲ್ಲಿ ಜೆಡಿಎಸ್‌ಗೆ ಬಹುಪಾಲು ಎಂದು ಹೇಳಿದ ಪ್ರಸಂಗವೂ ಜರುಗಿತು. ತಮ ಭಾಷಣದಲ್ಲಿ ಬಹುತೇಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಹಾಡಿ ಹೊಗಳಿದರು. ಜನ ಗೆಲ್ಲಲು ಬಿಜೆಪಿ ಕೊಟ್ಟಷ್ಟೇ ಕೊಡುಗೆಯನ್ನು ಜೆಡಿಎಸ್ ಕೂಡಾ ಕೊಟ್ಟಿದೆ. ಎರಡೂ ಕಡೆಗಳಲ್ಲಿ ಸೋತವನನ್ನು ರಾಷ್ಟ್ರೀಯ ನಾಯಕರು ಗುರುತಿಸಿ ಶಕ್ತಿ ಕೊಟ್ಟರು. ನನ್ನ ಗೆಲುವಿನಲ್ಲಿ ಜೆಡಿಎಸ್ ಪಾತ್ರ ತುಂಬಾ ಇದೆ ಎಂದರು.
ನಮಪ್ಪನಾಣೆಗೂ ಈ ಸರ್ಕಾರ ಇರುವವರೆಗೂ ಬಿಬಿಎಂಪಿ ಚುನಾವಣೆ ನಡೆಯುವುದಿಲ್ಲ. ಜಿ.ಪಂ ಚುನಾವಣೆಗೆ ಎರಡೂ ಪಕ್ಷದಿಂದ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯಾರು ಅಭ್ಯರ್ಥಿಗಳು ಎಂದು ನಾಯಕರು ಕುಳಿತು ತೀರ್ಮಾನ ಮಾಡಿ ಚುನಾವಣೆ ಎದುರಿಸಬೇಕು ಎಂದು ಇದೇ ವೇಳೆ ಸೋಮಣ್ಣ ಹೇಳಿದರು.