ಹಾಸನ, ಜೂ.23- ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರನ್ನು ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹೊಳೆನರಸೀಪುರದ ಠಾಣೆಯಲ್ಲಿ ನಿನ್ನೆ ಸಂಜೆ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರಕರಣದ ಬಗ್ಗೆ ವಿವರಣೆ ನೀಡಲು ಸೂರಜ್ ರೇವಣ್ಣ ಸೆನ್ ಪೊಲೀಸ್ ಠಾಣೆಗೆ ನಿನ್ನೆ ಸಂಜೆ ಹೋಗಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಇಂದು ಮುಂಜಾನೆ 4 ಗಂಟೆವರೆಗೂ ಅವರ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಬಳಿಕ ಬಂಧಿಸಿದ್ದಾರೆ.
ಪ್ರಕರಣದ ವಿಚಾರಣೆಗಾಗಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹಾಸನದ ಮಾಜಿ ಸಂಸದ, ಸೂರಜ್ ರೇವಣ್ಣ ಸಹೋದರ ಪ್ರಜ್ವಲ್ ರೇವಣ್ಣ ಈಗಾಗಲೇ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೆ. ಅವರು ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ. ಈಗ ಸೂರಜ್ ರೇವಣ್ಣ ಸಹ ಬಂಧನವಾಗಿದ್ದು, ರೇವಣ್ಣ ಅವರ ಇಬ್ಬರು ಪುತ್ರರು ಗಂಭೀರ ಆರೋಪ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂದು ಮುಂಜಾನೆ 4 ಗಂಟೆವರೆಗೂ ಸೂರಜ್ ರೇವಣ್ಣ ವಿಚಾರಣೆಯನ್ನು ಠಾಣೆಯಲ್ಲಿ ನಡೆಸಿದ್ದ ತನಿಖಾಧಿಕಾರಿ ಬಳಿಕ ನಗರದ ಸೆನ್ ಠಾಣೆಯಲ್ಲೇ ಸೂರಜ್ ಮಲಗಲು ವ್ಯವಸ್ಥೆ ಮಾಡಿದ್ದರು. ಇಂದು ಅವರ ವಿಚಾರಣೆ ಮುಂದುವರೆಯಲಿದೆ. ಅದಕ್ಕೂ ಮೊದಲು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಹಾಸನದ ಸೆನ್ ಠಾಣೆಯಲ್ಲಿ ಸೂರಜ್ ರೇವಣ್ಣ ಇದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿ ಮತ್ತೆ ತಮ ವಶಕ್ಕೆ ಪಡೆಯಲಿದ್ದಾರೆ. ಇಂದು ಕೋರ್ಟ್ ರಜೆ ಇರುವ ಕಾರಣ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗಿ ಹಾಜರುಪಡಿಸಲಿದ್ದಾರೆ.
ಭದ್ರತೆ :
ಸೂರಜ್ ಬಂಧನದ ಹಿನ್ನೆಲೆಯಲ್ಲಿ ಸೆನ್ ಠಾಣೆ ಮುಂದೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, 3 ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.ಸೂರಜ್ ರೇವಣ್ಣ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಕಾರಣ ಅವರ ವಿರುದ್ಧದ ಪ್ರಕರಣದ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ.
ಸದ್ಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆ ಅಗುವ ನಿರೀಕ್ಷೆ ಇದ್ದು, ಈ ಕುರಿತು ಪೊಲೀಸರು ಕಾನೂನು ತಜ್ಞರ ಜೊತೆ ಚರ್ಚೆ ನಡೆೆಸಿದ್ದಾರೆ.
ಕಾರು ತೆಗೆದುಕೊಂಡು ಹೋದ ಚಾಲಕ :
ನಿನ್ನೆ ಸಂಜೆ ಸೂರಜ್ ತಮ ಮೇಲಿನ ಆರೋಪದ ಬಗ್ಗೆ ದಾಖಲಾಗಿರುವ ಪ್ರಕರಣ ಸಂಬಂಧ ವಿಚಾರಿಸಲು ಠಾಣೆಗೆ ಕಾರಿನಲ್ಲಿ ಬಂದಿದ್ದರು. ಇಂದು ಮುಂಜಾನೆ ಅವರನ್ನು ಬಂಧಿಸಿದ ಕಾರಣ ಠಾಣೆ ಮುಂದೆ ನಿಲ್ಲಿಸಲಾಗಿದ್ದ ಕಾರನ್ನು ಇಂದು ಬೆಳಿಗ್ಗೆ ಅವರ ಚಾಲಕ ತೆಗೆದುಕೊಂಡು ಮನೆಗೆ ಹೋಗಿದ್ದಾರೆ.ಸೂರಜ್ ರೇವಣ್ಣ ವಿರುದ್ಧ ದೂರು ನೀಡಿರುವ ಸಂತ್ರಸ್ತ ಯುವಕನಿಗೆ ಇಂದು ವೈದ್ಯಕೀಯ ಪರೀಕ್ಷೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಿತು.