Friday, January 2, 2026
Homeರಾಜ್ಯಜನಾರ್ದನ ರೆಡ್ಡಿ ಅವರನ್ನು ಪೆಟ್ರೋಲ್‌ ಬಾಂಬ್‌ ಹಾಕಿ ಕೊಲೆ ಮಾಡುವ ಸಂಚು : ಶ್ರೀರಾಮುಲು

ಜನಾರ್ದನ ರೆಡ್ಡಿ ಅವರನ್ನು ಪೆಟ್ರೋಲ್‌ ಬಾಂಬ್‌ ಹಾಕಿ ಕೊಲೆ ಮಾಡುವ ಸಂಚು : ಶ್ರೀರಾಮುಲು

Plot to kill Janardhana Reddy with petrol bombs: Sriramulu

ಬಳ್ಳಾರಿ,ಜ.2- ನಗರದಲ್ಲಿ ಗುರುವಾರ ರಾತ್ರಿ ನಡೆದ ಗಲಭೆ ವೇಳೆ ಶಾಸಕ ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಟ್ಟುಕೊಂಡು ಕೆಲವರು ಪೆಟ್ರೋಲ್‌ಬಾಂಬ್‌ ಹಾಕಿ ಕೊಲೆ ಮಾಡುವ ಸಂಚು ರೂಪಿಸಿದ್ದರು. ಸರ್ಕಾರ ಈ ಪ್ರಕರಣವನ್ನು ಹೈಕೋರ್ಟ್‌ ನ್ಯಾಯಮೂರ್ತಿ ಇಲ್ಲವೇ ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮಲು ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಳ್ಳಾರಿಯಲ್ಲಿ ನಡೆದ ಗಲಭೆ ಸಾಮಾನ್ಯ ಗಲಾಟೆಯಲ್ಲ. ಇದೊಂದು ಪೂರ್ವನಿಯೋಜಿತ ಕೃತ್ಯ. ಜನಾರ್ದನ ರೆಡ್ಡಿ ಅವರನ್ನು ಗನ್‌ಪಾಯಿಂಟ್‌ ಮೇಲಿಟ್ಟು ಪೆಟ್ರೋಲ್‌ ಬಾಂಬ್‌ ಮೂಲಕ ಕೊಲೆ ಮಾಡುವ ಸಂಚು ರೂಪಿಸಲಾಗಿತ್ತೆಂದು ಗಂಭೀರ ಆರೋಪ ಮಾಡಿದರು.
ಈ ಘಟನೆಗೆ ಶಾಸಕ ನಾರಾ ಭರತ್‌ ರೆಡ್ಡಿ ಅವರ ಆಪ್ತ ಸತೀಶ್‌ ರೆಡ್ಡಿ ಹಾಗೂ ಅವರ ಬೆಂಬಲಿಗರೇ ನೇರ ಕಾರಣ. ರಾಜ್ಯ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹೀಗಾಗಿ ಹೈಕೋರ್ಟ್‌ ನ್ಯಾಯಮೂರ್ತಿ ಇಲ್ಲವೇ ಸಿಬಿಐನಿಂದ ತನಿಖೆ ನಡೆಸಬೇಕು. ಆಗಮಾತ್ರ ಸತ್ಯಾಂಶ ಹೊರಬಲಿದೆ ಎಂದು ಹೇಳಿದರು.

ನಿನ್ನೆ ಆದಂತಹ ಘಟನೆ ನಮೆಲ್ಲರಿಗೂ ನೋವು ತರಿಸಿದೆ. ಏನು ನಡೆಯಬಾರ ದಾಗಿತ್ತೋ ಅದೆಲ್ಲಾ ನಡೆದು ಹೋಗಿದೆ. ಅಮಾಯಕ ರಾಜಶೇಖರ್‌ ಎಂಬ ಯುವಕನ ಸಾವಾಗಿದೆ. ಮಗನ ಬಗ್ಗೆ ತಾಯಿ ಭವಿಷ್ಯ ಕಟ್ಟಿಕೊಂಡಿದ್ದಳು. ಆ ಯುವಕ ಯಾವುದೇ ಪಾರ್ಟಿಗೆ ಸೇರಿರಲಿ. ಫೈರಿಂಗ್‌ನಲ್ಲಿ ಆತನ ಸಾವಾಗಿದೆ. ರಾಜಶೇಖರ್‌ ರೆಡ್ಡಿಗೆ ಸಂತಾಪ ಸೂಚಿಸುತ್ತೇನೆ. ಆ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ. ಈಗಾಗಲೇ ಆಗಿರುವ ಪ್ರತಿಯೊಂದೂ ಮಾಹಿತಿಯನ್ನೂ ಹೇಳಿದ್ದೇನೆ. ನಾನು ರಾಜಕಾರಣದಲ್ಲಿ ಸಾಕಷ್ಟು ನೋಡಿದ್ದೇನೆ ಎಂದು ಬೇಸರ ಹೊರಹಾಕಿದರು.

ಬ್ಯಾನರ್‌ ಕಟ್ಟುವುದು ಬೇಡ ಎಂದು ಹೇಳಿಲ್ಲ. ಕಾರು ಹೋಗುವುದಕ್ಕೆ ಜಾಗ ಬಿಟ್ಟು ಕಟ್ಟಲು ಹೇಳಲಾಗಿತ್ತು. ಜಗಳ ಮಾಡಲೇಬೇಕು ಎಂದು ಪ್ಲಾನ್‌ ಮಾಡಿಕೊಂಡು ಬಂದಿದ್ದಾರೆ. ಜನಾರ್ದನ ರೆಡ್ಡಿ ಬರುವಾಗ ಏಕಾಏಕೀ ಜಗಳ ಆಯಿತು. ನಾನೂ ಬಂದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಅಷ್ಟರೊಳಗೆ ಪೊಲೀಸರು ಬಂದು ಗುಂಪು ಚದುರಿಸಿದರು. ಅದಕ್ಕೂ ಮೊದಲು ಸತೀಶ್‌ ರೆಡ್ಡಿ ಬಾಡಿಗಾರ್ಡ್‌ಗಳು ಸಿನಿಮಾದಲ್ಲಿ ಹೊಡೆದಂತೆ ಬುಲೆಟ್‌ ಫೈರ್‌ ಮಾಡಿದ್ದರು ಎಂದು ವಿವರಿಸಿದರು.

ಬಳ್ಳಾರಿಯಲ್ಲಿ 1982ರಲ್ಲಿ ಒಂದು ಘಟನೆ ನಡೆದಿತ್ತು. ಆ ರೀತಿಯ ಘಟನೆ ಮತ್ತೇ ಇದೀಗ ನಡೆದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಫೈರಿಂಗ್‌ ಮಾಡಿದ್ದಾರೆ. ಫೈರಿಂಗ್‌ ಮಾಡೋದಕ್ಕೆ ಅವಕಾಶ ಯಾರು ಕೊಟ್ಟರು? ಮೇಲ್ನೋಟಕ್ಕೆ ಅವರಿಂದಲೇ ಫೈರಿಂಗ್‌ ಆಗಿರುವುದು ಗೊತ್ತಾಗಿದೆ. ಓರ್ವ ವ್ಯಕ್ತಿಯ ಸಾವಿಗೆ ಕಾಂಗ್ರೆಸ್‌‍ ಕಾರ್ಯಕರ್ತರು ನಡೆಸಿದ ದಾಂಧಲೆಯೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.

ಇನ್ನು ಘಟನೆಗೆ ಸಂಬಂಧಿಸಿದಂತೆ ವಾಲೀಕಿ ಸಮುದಾಯವನ್ನು ಮಧ್ಯೆ ಎಳೆದು ತರುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿ. ಶ್ರೀರಾಮುಲು, ವಿನಾಕಾರಣ ಸಮಯದಾಯವನ್ನು ಗುರಿ ಮಾಡುವುದು ಬೇಡ. ಯಾವ ಕಾರಣಕ್ಕೆ ಗಲಾಟೆ ನಡೆಯಿತು? ಗಲಾಟೆ ಆರಂಭಕ್ಕೆ ಯಾರು ಕಾರಣರು? ಎಂಬುದರ ಬಗ್ಗೆ ತನಿಖೆ ನಡೆಯಲಿ ಎಂದು ಹೇಳಿದರು.

ಬಳ್ಳಾರಿ ಗಲಾಟೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಕುರಿತು ಜನಾರ್ದನ ರೆಡ್ಡಿ ಪರ ಮಾತನಾಡಿದ ಶ್ರೀರಾಮುಲು, ಇಡೀ ಪ್ರಕರಣವನ್ನು ಹೈಕೋರ್ಟ್‌ ನಾಯ್ಯಾಧೀಶರಿಂದ ಅಥವಾ ಸಿಬಿಐನಿಂದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಮೃತ ಯುವಕ ಯಾವ ಪಕ್ಷಕ್ಕೆ ಸೇರಿದ್ದ ಎಂಬುದು ಮುಖ್ಯವಲ್ಲ ಯುವಕನ ಸಾವು ಹೇಗಾಯಿತು ಎಂಬುದರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಪೆಟ್ರೋಲ್‌ ಬಾಂಬ್‌, ರಿವಾಲ್ವರ್‌ ಜೊತೆ ಕಾದಾಟಕ್ಕೆ ಬಂದವರು ಯಾರು ಎಂಬುದು ರಾಜ್ಯದ ಜನತೆಗೆ ಗೊತ್ತಾಗೇಬೇಕು ಎಂದು ಶ್ರೀರಾಮುಲು ಹೇಳಿದರು.

RELATED ARTICLES

Latest News