ಬೆಂಗಳೂರು, ಜ.3- ಕೋಗಿಲು ಕ್ರಾಸ್ ಬಳಿಯ ಒತ್ತುವರಿ ತೆರವು ಹಾಗೂ ಅನಂತರದ ಪುನರ್ ವಸತಿ ಯೋಜನೆಗಳು, ಲೋಕಾಯುಕ್ತ ಕಾಯ್ದೆಯ ತಿದ್ದುಪಡಿ, ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಾವಣೆ ಸೇರಿದಂತೆ ಹಲವಾರು ಮಹತ್ವದ ವಿಚಾರಗಳನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ವರ್ಷದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಸುಮಾರು 30ಕ್ಕೂ ಹೆಚ್ಚು ವಿಷಯಗಳನ್ನು ಚರ್ಚಿಸುವ ಸಾಧ್ಯತೆ ಇದೆ. ಎಂದಿನಂತೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಆರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಮಂಜೂರಾತಿ ವಿಚಾರವು ಸಭೆಯ ಕಾರ್ಯಸೂಚಿಯಲ್ಲಿ ಅಡಕವಾಗಿದೆ ಎಂದರು.
2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ರಸ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸಿಐಡಿ ಸಲ್ಲಿಸಿದ ವರದಿಯ ಆಧಾರದ ಮೇಲೆ, ಕರ್ನಾಟಕ ಲೋಕಸೇವಾ ಆಯೋಗದ ಹಿಂದಿನ ಕಾರ್ಯದರ್ಶಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಆರ್.ಸುಂದರ್ ವಿರುದ್ಧ ಪ್ರಾರಂಭಿಸಲಾದ ಇಲಾಖೆ ವಿಚಾರಣೆಯನ್ನು ಕೈಬಿಡುವ ಪ್ರಸ್ತಾವನೆಯೂ ಚರ್ಚೆಯಲ್ಲಿದೆ.
2025-26 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ ವಿವಿಧ ಯೋಜನೆಗಳಿಗೆ 41.80 ಕೋಟಿ ರೂಪಾಯಿಗಳ ಸಮಗ್ರ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸುವುದು, ಬೆಳಗಾವಿಯ ಗೋಕಾಕ್ ತಾಲೂಕಿನಲ್ಲಿ 100 ಹಾಸಿಗೆಗಳ ಹೊಸ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದು ಸಂಪುಟದ ಮುಂದಿರುವ ಪ್ರಸ್ತಾವನೆಗಳಾಗಿವೆ.ಪ್ರಮುಖವಾಗಿ ಬೆಂಗಳೂರು ಉಪನಗರ ಸಾರಿಗೆ ಯೋಜನೆಯ ಕಾರಿಡಾರ್-2 ಮತ್ತು 4 ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚ 16,867 ಕೋಟಿ ರೂಪಾಯಿಗಳಿಗೆ ಅನುಮೋದಿಸುವ ಸಾಧ್ಯತೆ ಇದೆ. ಬೆಂಗಳೂರಿನ ಬ್ಯೂಸಿನೆಸ್ ಕಾರಿಡಾರ್ ಫೆರಿಫರಲ್ ರಿಂಗ್ ರಸ್ತೆಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ಪೈಕಿ, 948 ಎಕರೆಗೂ ಹೆಚ್ಚಿನ ಜಮೀನಿಗೆ ಭೂ ಮಾಲೀಕರಿಗೆ 2025ರ ಅಕ್ಟೋಬರ್ 17ರಂದು ಹೊರಡಿಸಿರುವ ಆದೇಶದಂತೆ ಪರಿಹಾರ ನೀಡಲು ಸಂಪುಟದಲ್ಲಿ ಚರ್ಚೆ ನಡೆದಿದೆ.
ಬೆಂಗಳೂರಿನ ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ ಕಾಯ್ದಿಟ್ಟ ಅರಣ್ಯ ಭೂಮಿ ಪೈಕಿ 153 ಎಕರೆಯಲ್ಲಿ ವಿಶ್ವಗುರು ಬಸವಣ್ಣನವರ ಜೀವ ವೈವಿಧ್ಯಮಯವಾದ ಬೃಹತ್ ಉದ್ಯಾನವನ ನಿರ್ಮಿಸುವ ಬಗ್ಗೆ ಚರ್ಚೆಯಾಗಿದೆ. ಇದಕ್ಕಾಗಿ 50 ಕೋಟಿ ರೂ. ಖರ್ಚು ಮಾಡುವ ಸಾಧ್ಯತೆ ಇದೆ.
ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣವಿಧೇಯಕ 2026 ಕ್ಕೆ ಅನುಮೋದಿಸುವ ಬಗ್ಗೆ ಚರ್ಚೆಗಳಾಗುತ್ತಿವೆ.
ಬೆಂಗಳೂರಿನಲ್ಲಿರುವ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಆವರಣದಲ್ಲಿ 10 ಎಕರೆ ಜಮೀನನ್ನು ಎಲ್ಲಾ ಅಂಗಾಂಗ ಕಸಿ ಒಳಗೊಂಡಂತೆ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಆಸ್ಪತ್ರೆಯನ್ನು ನಿರ್ಮಾಣ ಮಾಡಲಿಕ್ಕಾಗಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಗೆ 99 ವರ್ಷಗಳ ಅವಧಿಗೆ ಭೂಮಿಯನ್ನು ಗುತ್ತಿಗೆ ನೀಡುವ ಒಪ್ಪಂದ ಕುರಿತು ಹಾಗೂ ಕಿದ್ವಾಯಿ ಸಾರಕ ಗ್ರಂಥಿ ಸಂಸ್ಥೆಗೆ ಒಟ್ಟು 24 ಕೋಟಿ ವೆಚ್ಚದಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ಪೂರೈಸುವ ಚರ್ಚೆಗಳಾಗಿವೆ.
ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ವಿಕಸಿತ ಭಾರತ ಜಿ ರಾಮ್ ಜಿ ಎಂದು ನಾಮಕರಣ ಮಾಡಿದ್ದು, ಅದರ ಅನುಷ್ಠಾನ ಬಗ್ಗೆ ಚರ್ಚೆಗಳಾಗುತ್ತಿವೆ. ಇನ್ಫೋಸಿಸ್ ಸಂಸ್ಥೆ ವತಿಯಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ 94 ಸರ್ಕಾರಿ ಶಾಲೆಗಳಿಗೆ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ 16 ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತಿಕರಿಸಲು 685.57 ಕೋಟಿ ರೂಪಾಯಿಗಳ ವೆಚ್ಚದ ಯೋಜನೆಗೆ ಅನುಮತಿಸುವ ಸಾಧ್ಯತೆ ಇದೆ.ಕೋಗಿಲು ಕ್ರಾಸ್ ಬಳಿ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣದಲ್ಲಿ ಸಂತ್ರಸ್ಥರಿಗೆ ಮನೆ ನೀಡುವ ಬಗ್ಗೆಯೂ ಚರ್ಚೆಯಾಗಬೇಕಿದೆ.
