ಬೆಂಗಳೂರು, ಜೂ.24-ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗಿರುವ 11 ಮಂದಿ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಆಯ್ಕೆಯಾಗಿರುವ 6 ಮಂದಿ ಸೇರಿದಂತ ಒಟ್ಟು 17 ಮಂದಿ ವಿಧಾನ ಪರಿಷತ್ ನೂತನ ಸದಸ್ಯರಾಗಿ ಇಂದು ಪ್ರಮಾವಣ ವಚನ ಸ್ವೀಕರಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ನೂತನ ಸದಸ್ಯರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.ವಿಧಾನಸಭೆಯ ಸದಸ್ಯರಿಂದ 11 ಮಂದಿ, ಶಿಕ್ಷಕರ ಕ್ಷೇತ್ರಗಳಿಂದ ಮೂವರು ಹಾಗೂ ಪದವೀಧರ ಕ್ಷೇತ್ರಗಳಿಂದ ಮೂವರು ಸದಸ್ಯರು ಚುನಾಯಿತರಾಗಿದ್ದರು.
ಆಡಳಿತಾರೂಢ ಕಾಂಗ್ರೆಸ್‌ನಿಂದ ಸಚಿವ ಎನ್.ಎಸ್.ಬೋಸರಾಜು, ಕೆ.ಗೋವಿಂದರಾಜು, ಎ.ವಸಂತಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಐವಾನ್ ಡಿಸೋಜ, ಜಗದೇವ ಗುತ್ತೇದಾರ್, ಬಲ್ಕೀಸ್ ಬಾನು, ಡಿ.ಟಿ.ಶ್ರೀನಿವಾಸ, ರಾಮೋಜಿಗೌಡ, ಡಾ. ಚಂದ್ರಶೇಖರ ಬಸವರಾಜ ಪಾಟೀಲ ಸೇರಿದಂತೆ 10 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಬಿಜೆಪಿಯಿಂದ ಸಿ.ಟಿ.ರವಿ, ಎನ್.ರವಿಕುಮಾರ್, ಮೂಳೆ ಮಾರುತಿರಾವ್, ಡಾ.ಧನಂಜಯ ಸರ್ಜಿ ಸೇರಿದಂತೆ ನಾಲ್ಕು ಮಂದಿ ಹಾಗೂ ಜೆಡಿಎಸ್‌ನಿಂದ ಟಿ.ಎನ್.ಜವರಾಯಿಗೌಡ, ಎಸ್.ಎಲ್.ಭೋಜೇಗೌಡ, ಕೆ. ವಿವೇಕಾನಂದ ಸೇರಿದಂತೆ ಮೂವರು ಮೇಲನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ಅಭಿಮಾನಿಗಳು ಹಾಗೂ ಕುಟುಂಬದವರು ಹಾಜರಿದ್ದು, ನೂತನ ಮೇಲನೆ ಸದಸ್ಯರನ್ನು ಅಭಿನಂದಿಸಿದರು.