ಬಳ್ಳಾರಿ, ಜ.3- ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜ್ಯದ ಗಡಿ ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ಮಾಡಿರುವ ಆರೋಪ ಕುರಿತ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಿದೆ. ಇದು ಜನರಿಗೆ ಗೊತ್ತಾಗಬಾರದು ಮತ್ತು ವಾಲೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಬಾರದು ಎಂಬ ದುರುದ್ದೇಶದಿಂದ ಬಳ್ಳಾರಿಯಲ್ಲಿ ಗಲಭೆ ಸೃಷ್ಟಿಸಲಾಗಿದೆ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ ರೆಡ್ಡಿ ಆರೋಪಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಮೃತಪಟ್ಟ ಪಕ್ಷದ ಕಾರ್ಯಕರ್ತನ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ತಾವು ಊರಿನಲ್ಲಿ ಇರಲಿಲ್ಲ. ಹೀಗಾಗಿ ಗಲಭೆಯಲ್ಲಿ ನನ್ನ ಕೈವಾಡ ಇದೆ ಎಂದು ಹೇಳುವುದು ಅನಗತ್ಯವಾದ ಆರೋಪ ಎಂದರು.
ವಾಲೀಕಿ ಕಾರ್ಯಕ್ರಮವನ್ನು ತಡೆಯುವುದು ಅವರ ಮೂಲ ಉದ್ದೇಶವಾಗಿತ್ತು. ಅದಕ್ಕಾಗಿಯೇ ಗಲಭೆಯ ವಾತಾವರಣ ವನ್ನು ಸೃಷ್ಟಿಸಿದ್ದಾರೆ. ನಮ ಕಾರ್ಯಕರ್ತನ ಸಾವಾಗಿದೆ. ಆತನ ಆತಕ್ಕೆ ಶಾಂತಿ ಸಿಗಬೇಕಾದರೆ ವಾಲೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹಿತೈಷಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಕಾರ್ಯಕರ್ತನ ಸಾವಿನ ನಡುವೆಯೂ ನಾಳೆ ವಾಲೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಹೇಳುವುದೆಲ್ಲ ಸುಳ್ಳು ಎಂದು ಬಳ್ಳಾರಿ ಜನರಿಗೆ ಮತ್ತು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ತೆಲಂಗಾಣ-ಆಂಧ್ರಪ್ರದೇಶದಿಂದ ಜನರನ್ನು ಕರೆಸಿ ಹೆದರಿಸುವ ಪ್ರಯತ್ನ ಮಾಡಿದರೆ ಬಳ್ಳಾರಿಯವರು ಭಯ ಪಡುವುದಿಲ್ಲ. ಅವರ ಇಂತಹ ಪ್ರಯತ್ನಗಳು ವ್ಯರ್ಥವಾಗುತ್ತವೆ ಎಂದರು. ಕಾರ್ಯಕ್ರಮಕ್ಕಾಗಿ ರಸ್ತೆಯಲ್ಲಿ ಬ್ಯಾನರ್ ಕಟ್ಟಲಾಗಿತ್ತು. ಜನಾರ್ಧನ ರೆಡ್ಡಿ ನನ್ನ ಮನೆಯಲ್ಲೇ ಬ್ಯಾನರ್ ಕಟ್ಟಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆತ ಎಷ್ಟು ಸುಳ್ಳು ಹೇಳುತ್ತಾನೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.
ಕರ್ನಾಟಕದ ಗಡಿ ಭಾಗವನ್ನು ಒತ್ತುವರಿ ಮಾಡಿಕೊಂಡು ಆಕ್ರಮ ಗಣಿಗಾರಿಕೆಯನ್ನು ಮಾಡಿರುವ ಆರೋಪ ಸಾಬೀತಾಗುವಂತಹ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ. ಅದರಲ್ಲಿನ ವಾಸ್ತವಂಶಗಳು ಜನರಿಗೆ ಗೊತ್ತಾಗಬಾರದು ಎಂಬ ದುರುದ್ದೇಶದಿಂದ ಗಲಭೆ ಸೃಷ್ಟಿಯಾ
ಗುವಂತೆ ಮಾಡಿದ್ದಾರೆ. ಜೊತೆಗೆ ವಾಲೀಕಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಡೆಯುವುದು ಅವರ ಉದ್ದೇಶವಾಗಿತ್ತು. ನಾವು ಕಾರ್ಯಕ್ರಮ ಮಾಡುತ್ತೇವೆ, ಯಶಸ್ವಿಗೊಳಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಕಾರಣವಾದ ಗುಂಡು ಖಾಸಗಿ ಗನ್ ಮ್ಯಾನ್‌ಗಳ ಬಂದೂಕಿನಿಂದ ಹಾರಿದೆ ಎಂಬ ಆರೋಪದ ಬಗ್ಗೆ ಸದ್ಯಕ್ಕೆ ತಾವು ಪ್ರತಿಕ್ರಿಯಿಸುವುದಿಲ್ಲ. ಪೊಲೀಸರು ಈಗಾಗಲೇ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ತನಿಖೆ ಮಾಡಲು ಮುಕ್ತ ಅವಕಾಶಗಳಿವೆ. ನಾವು ಯಾವುದೇ ರೀತಿಯ ಹೇಳಿಕೆ ನೀಡಿದರೆ ಅದನ್ನು ತನಿಖೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಎಂದು ಬಿಂಬಿಸುತ್ತಾರೆ. ಅದಕ್ಕಾಗಿ ಸದ್ಯಕ್ಕೆ ನಾನು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.
