ಬೆಂಗಳೂರು, ಜೂ.26- ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯ ಬಳಿಕ ಸತ್ಯಾಸತ್ಯ ಆಧರಿಸಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ದಾಖಲಿಸಿದ ಬಳಿಕ ತನಿಖೆ ನಡೆಸಲಾಗುತ್ತದೆ. ಅವರ ಪಾತ್ರ ಇರುವುದು ಕಂಡುಬಂದರೆ ಸೂಕ್ತ ಕಾನೂನು ಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ತುಮಕೂರಿನಿಂದ ಪೈಪ್‌ಲೈನ್ ಮೂಲಕ ಹೇಮಾವತಿ ನೀರು ಸರಬರಾಜು ಮಾಡುವ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಡಿಯುವ ನೀರಿಗೆ ಯಾವ ನದಿಯಿಂದಾದರೂ ನೀರು ತೆಗೆದುಕೊಂಡು ಹೋಗಬಹುದು. ಇದಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಕೃಷ್ಣದಿಂದ ಕಾವೇರಿಗೆ, ಕಾವೇರಿಯಿಂದ ಕೃಷ್ಣಗೆ ನೀರು ತೆಗೆದುಕೊಂಡು ಹೋಗಲು ಅವಕಾಶವಿದೆ. ಹಾಗಾಗಿ ಮಾಗಡಿ ಶಾಸಕ ಬಾಲಕೃಷ್ಣ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
ಯೋಜನೆ ವಿವಾದಕ್ಕೆ ಗುರಿಯಾಗಿದೆ. ಇದನ್ನು ಸರಿಪಡಿಸಲು ನಾವೆಲ್ಲಾ ಪ್ರಯತ್ನಿಸುತ್ತಿದ್ದೇವೆ. ನೀರಾವರಿ ಸಚಿವರು ಸಭೆ ಕರೆದಿದ್ದು, ಜಿಲ್ಲೆಯ ಜನರಿಗೆ ದೊರೆಯಬೇಕಾದ ನೀರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ತಾಂತ್ರಿಕವಾಗಿ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಬಗ್ಗೆ ತಾಂತ್ರಿಕ ಸಮಿತಿ ರಚಿಸುವಂತೆ ಜಿಲ್ಲೆಯ ಶಾಸಕರು ಒತ್ತಾಯಿಸಿದರು. ಸಚಿವರು ಅದಕ್ಕೆ ಒಪ್ಪಿಗೆ ಸೂಚಿಸಿದರು. ಸಮಿತಿ ರಚಿಸಿ ಹೊರಗೆ ನಡೆದ ಬಳಿಕ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬೇಕು ಎಂದು ನಾವು ಪರಿಶೀಲಿಸುತ್ತೇವೆ ಎಂದು ಹೇಳಿದರು.