ಪಾವಗಡ,ಜ.3- ತಾಲ್ಲೂಕಿನ ಪೆನ್ನೋಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಜಂಪಕ್ಕ ರಾಮಣ್ಣ ಅವರಿಗೆ ಸೇರಿದ 300 ಕುರಿಗಳ ಪೈಕಿ 50ಕ್ಕೂ ಹೆಚ್ಚು ಕುರಿಗಳು ವಿಷಮಿಶ್ರಿತ ಆಹಾರ ಸೇವಿಸಿ ಸಾವನ್ನಪ್ಪಿರುವ ಘಟನೆ ರಾತ್ರಿ ಸಂಭವಿಸಿದೆ.
ಎಂದಿನಂತೆ ಕುರಿಗಳನ್ನು ಮೇಯಿಸಲು ಕರೆದೊಯ್ದು ಹಟ್ಟಿಗೆ ವಾಪಸ್ ಕರೆತರುವ ವೇಳೆ ಚಿಗುರುಚಪ್ಪೆ ಪ್ರದೇಶದಲ್ಲಿ ಸೈನೈಡ್ ವಿಷ ಮಿಶ್ರಿತ ಆಹಾರ ಸೇವಿಸಿ ಕುರಿತುಗಳು ಸಾವನ್ನಪ್ಪಿವೆ. ಘಟನಾ ಸ್ಥಳಕ್ಕೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ವರಕೇರಪ್ಪ ಸೇರಿದಂತೆ ವೈದ್ಯರಾದ ಧರಣೆ, ಸತೀಶ್ ಶೆಟ್ಟಿ, ಶಿವಕುಮಾರ್ ಹಾಗೂ ಸಿಬ್ಬಂದಿ ದಿನೇಶ್ ಭೇಟಿ ನೀಡಿ, ಅಸ್ವಸ್ಥಗೊಂಡಿದ್ದ ಉಳಿದ ಕುರಿಗಳಿಗೆ ತಕ್ಷಣ ಚಿಕಿತ್ಸೆ ನೀಡಿ ಹೆಚ್ಚಿನ ಸಾವು ತಪ್ಪಿಸುವಲ್ಲಿ ಯಶಸ್ವಿಯಾದರು. ಕುರಿ ಸಾಕಾಣಿಕೆಯನ್ನೆ ನಂಬಿ ಬದುಕು ನಡೆಸುತ್ತಿರುವ ಗೊಲ್ಲರಹಟ್ಟಿ ಕುಟುಂಬಕ್ಕೆ ಭಾರೀ ನಷ್ಟ ಉಂಟಾಗಿದೆ.
ಸಂತ್ರಸ್ತ ರೈತ ಜಂಪಕ್ಕ ರಾಮಣ್ಣ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಮುಖಂಡರಾದ ಮದನ್ ರೆಡ್ಡಿ, ಸಾಸಲಕುಂಟೆ ಪಾಲಾಕ್ಷ, ತಿಪ್ಪನಾಯಕ, ನಾರಾಯಣ್ ರೆಡ್ಡಿ, ಈರಣ್ಣ, ಪ್ರತಾಪ್ ರೆಡ್ಡಿ, ವೇಣುಗೋಪಾಲ ರೆಡ್ಡಿ, ಶಿವಣ್ಣ, ದರ್ಶನ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಸಹಕಾರ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ನೆರವಾಗಿದ್ದಾರೆ.
