Friday, November 22, 2024
Homeರಾಷ್ಟ್ರೀಯ | Nationalತಿಹಾರ್‌ ಜೈಲಿನಲ್ಲೇ ದೆಹಲಿ ಸಿಎಂ ಕೇಜ್ರಿವಾಲ್‌ ಅವರನ್ನು ಬಂಧಿಸಿದ ಸಿಬಿಐ

ತಿಹಾರ್‌ ಜೈಲಿನಲ್ಲೇ ದೆಹಲಿ ಸಿಎಂ ಕೇಜ್ರಿವಾಲ್‌ ಅವರನ್ನು ಬಂಧಿಸಿದ ಸಿಬಿಐ

ನವದೆಹಲಿ,ಜೂ.26– ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್‌ ಜೈಲಿನಲ್ಲಿದ್ದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಸಿಬಿಐ ಜೈಲಿನಲ್ಲೇ ಬಂಧಿಸಿದೆ.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರಕ್ಕೆ ನಿಗದಿಪಡಿಸಿತ್ತು. ಆದರೆ ಅದಕ್ಕೂ ಒಂದು ದಿನದ ಮೊದಲೇ ಸಿಬಿಐ ಅವರನ್ನು ಬಂಧಿಸುವ ಮೂಲಕ ಕೇಜ್ರಿವಾಲ್‌ಗೆ ಮತ್ತೊಂದು ಶಾಕ್‌ ನೀಡಿದೆ.

ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅರವಿಂದ್‌ ಕೇಜ್ರಿವಾಲ್‌ ಬಂಧನಕ್ಕೆ ಒಳಗಾಗಿ ತಿಹಾರ್‌ ಜೈಲಿನಲ್ಲಿ ದ್ದಾರೆ. ಸಿಬಿಐ ತಿಹಾರ್‌ ಜೈಲಿನಲ್ಲೇ ಅರವಿಂದ್‌ ಕೇಜ್ರಿವಾಲ್‌ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಕಳೆದ ವಾರ ಕೇಜ್ರಿವಾಲ್‌ ಅವರನ್ನು ವಿಚಾರಣೆಗೊಳಪಡಿಸಲು ಸಿಬಿಐ ಅನುಮತಿ ಕೋರಿತ್ತು. ಬುಧವಾರ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಹಾಜರುಪಡಿಸಲು ಸಿಬಿಐ ಅನುಮತಿ ಪಡೆದುಕೊಂಡಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಆಪ್‌ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಪ್ರತಿಕ್ರಿಯಿಸಿ, ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸುಪ್ರೀಂಕೋರ್ಟ್‌ನಿಂದ ಜಾಮೀನು ಸಿಗುವ ಸಾಧ್ಯತೆ ಇರುವಾಗ ದೆಹಲಿ ಸಿಎಂ ವಿರುದ್ಧ ನಕಲಿ ಸಿಬಿಐ ಪ್ರಕರಣವನ್ನು ದಾಖಲಿಸಿ ಬಂಧಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಮೂಲಗಳು ನನಗೆ ತಿಳಿಸಿವೆ. ಇಡೀ ರಾಷ್ಟ್ರವು ಅರವಿಂದ್‌ ಕೇಜ್ರಿವಾಲ್‌ ಅವರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್‌ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ತಡೆದಿತ್ತು. ವಿಚಾರಣಾ ನ್ಯಾಯಾಲಯದ ಆದೇಶವು ವಿಕೃತತೆಯನ್ನು ಪ್ರತಿಬಿಂಬಿಸುತ್ತದೆ ಎಂದು ದೆಹಲಿ ಹೈಕೋರ್ಟ್‌ ಹೇಳಿತ್ತು.

ದೆಹಲಿ ಅಕ್ರಮ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಕಳೆದ ಮಾ.21ರಂದು ಇ.ಡಿ ಬಂಧಿಸಿತ್ತು. ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್‌ ಜೂ.1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಜೂ.2ರಂದು ಅವರು ಮತ್ತೆ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಸಿಎಂ ಅರವಿಂದ್‌ ಕೇಜ್ರಿವಾಲ್‌‍ಗೆ ದೆಹಲಿ ಹೈಕೋರ್ಟ್‌ನಿಂದ ಮತ್ತೆ ಹಿನ್ನಡೆಯಾಗಿದೆ.

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನದಲ್ಲಿರುವ ಕೇಜ್ರಿವಾಲ್‌‍ಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿ ಹೈಕೋರ್ಟ್‌ ಆದೇಶಿಸಿದೆ. ನ್ಯಾಯಮೂರ್ತಿ ಸುಧೀರ್‌ ಕುಮಾರ್‌ ಜೈನ್‌ ಅವರಿದ್ದ ಪೀಠವು ರೋಸ್‌‍ ಅವೆನ್ಯೂ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿ ಆದೇಶ ಮಾಡಿದೆ.

ತೀರ್ಪು ಪ್ರಕಟಿಸುವ ಮುನ್ನ,ಕೇಜ್ರಿವಾಲ್‌‍ಗೆ ಜಾಮೀನು ನೀಡುವಾಗ ಜಾರಿ ನಿರ್ದೇಶನಾಲಯನೀಡಿದ ಸಾಕ್ಷ್ಯಗಳ ಕುರಿತಂತೆ ವಿಚಾರಣಾ ನ್ಯಾಯಾಲಯ ತನ್ನ ವಿವೇಚನೆ ಬಳಸಲಿಲ್ಲ. ಹಾಗೆ ಪ್ರಕರಣ ಕುರಿತು ವಾದಿಸಲು ಇ.ಡಿಗೆ ಸೂಕ್ತ ಅವಕಾಶ ನೀಡಿಲ್ಲ. ಅಲ್ಲದೇ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಮ್‌‍ಎಲ್‌‍ಎ)ಯ ಸೆಕ್ಷನ್‌ 45ರಡಿ ಜಾಮೀನಿಗೆ ಅವಳಿ ಷರತ್ತುಗಳ ಕುರಿತಾದ ವಾದಕ್ಕೂ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ.

ಹೀಗಾಗಿ ವಿಚಾರಣಾ ನ್ಯಾಯಾಲಯವು ದಾಖಲೆಯತ್ತ ಗಮನ ಹರಿಸಲಿಲ್ಲ ಎಂದು ತೋರಿಸುತ್ತದೆ. ನಾವು ಎರಡೂ ಕಡೆಯ ವಾದವನ್ನು ಆಲಿಸಿದ್ದೇವೆ ಎಂದು ನ್ಯಾ.ಸುದೀರ್‌ ಕುಮಾರ್‌ ಜೈನ್‌ ಅವರ ಪೀಠ ತಿಳಿಸಿ ಜಾಮೀನು ರದ್ದುಗೊಳಿಸಿ ಆದೇಶ ಮಾಡಿದೆ.

ಈ ಹಿಂದೆ ಜೂ.20ರಂದು ಕೆಳ ನ್ಯಾಯಾಲಯವು ಈ ಪ್ರಕರಣದಲ್ಲಿ ಕೇಜ್ರಿವಾಲ್‌‍ಗೆ ಜಾಮೀನು ನೀಡಿತ್ತು, ಇದನ್ನು ಪ್ರಶ್ನಿಸಿ ಇಡಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಬಳಿಕ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನಿಗೆ ತಡೆ ನೀಡಿ ಆದೇಶ ಮಾಡಿತ್ತು.

RELATED ARTICLES

Latest News