Sunday, October 6, 2024
Homeರಾಜ್ಯಕರಾವಳಿಯಲ್ಲಿ ಮಳೆ ಅಬ್ಬರಕ್ಕೆ ಮತ್ತಿಬ್ಬರು ಬಲಿ, ವಿದ್ಯುತ್‌ ತಂತಿ ತಗುಲಿ ಆಟೋ ಚಾಲಕರಿಬ್ಬರ ಮೃತ್ಯು

ಕರಾವಳಿಯಲ್ಲಿ ಮಳೆ ಅಬ್ಬರಕ್ಕೆ ಮತ್ತಿಬ್ಬರು ಬಲಿ, ವಿದ್ಯುತ್‌ ತಂತಿ ತಗುಲಿ ಆಟೋ ಚಾಲಕರಿಬ್ಬರ ಮೃತ್ಯು

ಬೆಂಗಳೂರು, ಜೂ.27- ರಾಜ್ಯದ ಮಲೆನಾಡು, ಕರಾವಳಿ, ಕೊಡಗು ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.ಭಾರಿ ಮಳೆಯ ಆರ್ಭಟಕ್ಕೆ ನಿನ್ನೆಯಷ್ಟೇ ಮಂಗಳೂರಿನ ಮನೆಯೊಂದರ ಕಾಂಪೌಂಡ್‌ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಇಂದು ಭಾರಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ಮಂಗಳೂರಿನ ಪಾಂಡೇಶ್ವರಿ ರೋ ಸಾರಿಯೋ ಶಾಲೆಯ ಬಳಿ ಇಬ್ಬರು ಆಟೋ ಚಾಲಕರು ಮೃತಪಟ್ಟಿದ್ದಾರೆ.

ರಾಜು-ದೇವರಾಜು ಮೃತ ಆಟೋ ಚಾಲಕರೆಂದು ಗುರುತಿಸಲಾಗಿದೆ. ರಾತ್ರಿ ಭಾರಿ ಮಳೆ ಬಿದ್ದ ಪರಿಣಾಮ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ರಾಜು ಆಟೋಚಾಲಕ ಒದ್ದಾಡುತ್ತಿದ್ದ. ಅವರನ್ನು ಬಚಾವ್‌ ಮಾಡಲು ಮುಂದಾದ ಮತ್ತೊಬ್ಬ ಆಟೋ ಚಾಲಕನಿಗೂ ವಿದ್ಯುತ್‌ ಸ್ಪರ್ಶಗೊಂಡು ಇಬ್ಬರೂ ಸಾವನ್ನಪ್ಪಿದ್ದಾರೆ.ದಕ್ಷಿಣ ಕನ್ನಡ ಘಟ್ಟಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ.

ಕುಕ್ಕೆ ಸುಬ್ರಹಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದ್ದು, ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಕುಮಾರಧಾರ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದ್ದು, ಸುಬ್ರಹಣ್ಯ ದೇವಾಲಯದ ಆವರಣದ ನದಿಗಿಳಿಯದಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದೆ.
ಭಾರಿ ಮಳೆಯಾಗುತ್ತಿದ್ದರೂ ನದಿ ದಡದಲ್ಲಿ ಭಕ್ತಾದಿಗಳು ತೀರ್ಥ ಸ್ನಾನ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ತಡೆಯಲು ಕುಮಾರಧಾರ ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿಗಳು ಮತ್ತು ಹೋಂಗಾರ್ಡ್‌್ಸ ಅನ್ನು ನಿಯೋಜನೆ ಮಾಡಲಾಗಿದೆ.

ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಆಗುಂಬೆ, ಚಾರ್ಮುಡಿ, ಶಿರಾಡಿ ಘಾಟ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ.ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಳೆದೆರಡು ದಿನಗಳಿಂದ ಮಳೆ ಬಿಟ್ಟೂ ಬಿಡದಂತೆ ಸುರಿಯುತ್ತಿದೆ. ರಸ್ತೆಗಳು, ಹೊಲಗದ್ದೆಗಳೆಲ್ಲಾ ಜಲಾವೃತವಾಗಿವೆ.

ಬಿಸಿ ರೋಡ್‌ ಜಂಕ್ಷನ್‌ ಸಹಿತ ಹಲವು ಪ್ರದೇಶಗಳಲ್ಲಿ ನಡೆದಾಡಲೂ ಆಗದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಇತ್ತ ಮಡಕೇರಿ, ಬಾಗಮಂಡಲ ಮತ್ತಿತರೆಡೆ ಮಳೆ ಅಬ್ಬರ ಮುಂದುವರೆದಿದೆ. ನಗರದ ಸುಲೆಮಾನ್‌ ಎಂಬುವರ ಮನೆಯ ಹಿಂದೆ ಮಣ್ಣು ಕುಸಿದಿದ್ದು, ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಣ್ಣು ತೆರವುಗೊಳಿಸಿದ್ದಾರೆ. ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸನ್ನದ್ಧ ಸ್ಥಿತಿಯಲ್ಲಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ.ಕಬಿನಿ, ಕಾವೇರಿ ಅಣೆಕಟ್ಟುಗಳ ಒಳಹರಿವು ಜಾಸ್ತಿಯಾಗಿದೆ.

RELATED ARTICLES

Latest News