ಬೆಂಗಳೂರು, ಜೂ.27- ನಾಡಪ್ರಭು ಕೆಂಪೇಗೌಡ ಅವರ ಆಳ್ವಿಕೆಯ ಮಾದರಿ ಮತ್ತು ಪ್ರೇರಣೆ ಎಂದು ಮುಖ್ಯಮಂತ್ರಿಸಿದ್ದರಾಮಯ್ಯ ತಿಳಿಸಿದ್ದಾರೆ.ವಿಧಾನಸೌಧದ ಮುಂದಿರುವ ಕೆಂಪೇಗೌಡರ ಪ್ರತಿಮೆಗೆ 515 ನೇ ಜಯಂತಿ ಅಂಗವಾಗಿ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದವರಾಗಿದ್ದು, ಜನಾನುರಾಗಿ ಆಡಳಿತಗಾರ.
ಕೃಷ್ಣದೇವರಾಯನ ಕಾಲದಲ್ಲಿ ಬೆಂಗಳೂರನ್ನು ಸಂಸ್ಥಾಪನೆ ಮಾಡಿದರು. ನೂರಾರು ಕೆರೆಕಟ್ಟೆಗಳನ್ನು ನಿರ್ಮಿಸಿದರು. ಇಂದು ಬೆಂಗಳೂರಿನಲ್ಲಿ ಹೆಚ್ಚು ಕೆರೆಗಳು ಹಾಗೂ ದೇವಸ್ಥಾನಗಳಿರಲು ಕೆಂಪೇಗೌಡರೇ ಕಾರಣ ಎಂದರು.
ವೃತ್ತಿ ಆಧಾರದ ಮೇಲೆ ಬೆಂಗಳೂರಿನಲ್ಲಿ ಪೇಟೆಗಳನ್ನು ನಿರ್ಮಿಸಿದರು. ಚಿಕ್ಕಪೇಟೆ, ದೊಡ್ಡಪೇಟೆ, ನಗರ್ತಪೇಟೆ, ತಿಗಳರ ಪೇಟೆ, ಬಳೆಪೇಟೆ ನಿರ್ಮಾಣ ಮಾಡಿ ವ್ಯಾಪಾರ ಕೇಂದ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಇಂದು ಬೆಂಗಳೂರು ವಿಶ್ವವಿಖ್ಯಾತವಾಗಲು ಕೆಂಪೇಗೌಡರೇ ಕಾರಣ ಎಂದು ಹೇಳಿದರು.
ತಾವು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ವತಿಯಿಂದ ಕೆಂಪೇಗೌಡರ ಜಯಂತಿ ಆಚರಿಸಲು ನಿರ್ಧಾರ ಕೈಗೆತ್ತಿಕೊಂಡಿದ್ದಲ್ಲದೆ, ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸರ್ಕಾರದಿಂದ ನಾಡಪ್ರಭುಗಳ ಜಯಂತಿ ಆಚರಣೆಯಾಗುತ್ತಿದೆ ಎಂದರು.