ಬೆಂಗಳೂರು, ಜೂ.27- ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಬೇಕು ಎನ್ನುವವರು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಬದಲಾಗಿ ಹೈಕಮಾಂಡ್ ಜೊತೆ ಚರ್ಚಿಸಿ ಬೇಡಿಕೆಯನ್ನು ಈಡೇರಿಸಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದ ಮುಂದಿರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಿಕೆಗಳಿಗೆ ಹೇಳಿಕೆ ನೀಡುವವರು ದೆಹಲಿಗೆ ಹೋಗಿ ಹೈಕಮಾಂಡ್ ಬಳಿ ಮಾತನಾಡಿ, ತಮಗೆ ಬೇಕಾದ ಪರಿಹಾರ ಪಡೆದುಕೊಂಡು ಬರಲಿ. ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಎಂದು ತಾಕೀತು ಮಾಡಿದರು.
ಮಾಧ್ಯಮಗಳು, ಪತ್ರಿಕೆಗಳು ಪರಿಹಾರ ನೀಡುವುದಿಲ್ಲ. ಪ್ರಚಾರ ಮಾತ್ರ ನೀಡುತ್ತವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಎನ್ನುವವರೂ ಕೂಡ ಸಮಯ ವ್ಯರ್ಥ ಮಾಡಬಾರದು. ಎಲ್ಲಿಂದ ಪರಿಹಾರ ಪಡೆಯಬೇಕೋ, ಅಲ್ಲಿಂದ ಪಡೆದುಕೊಳ್ಳಲಿ. ಹೇಳಿಕೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ವೈದ್ಯರ ಬಳಿ ಹೋದರೆ ಒಂದಿಷ್ಟು ಔಷಧ ಸಿಗುತ್ತದೆ, ವಕೀಲರ ಬಳಿ ಹೋದರೆ ಕಾನೂನು ಸಲಹೆ ಸಿಗುತ್ತದೆ. ಹೀಗಾಗಿ ಬೇಡಿಕೆಗಳ ಬಗ್ಗೆ ಚರ್ಚೆ ಮಾಡುವವರು ಎಲ್ಲಿ ಬೇಕೋ ಅಲ್ಲಿ ಪರಿಹಾರ ಪಡೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ನೂತನ ಸಂಸದರನ್ನು ದೆಹಲಿಯಲ್ಲಿ ಭೇಟಿ ಮಾಡುತ್ತಿದ್ದೇವೆ. ಈಗಲಾದರೂ ರಾಜ್ಯದಿಂದ ಆಯ್ಕೆಯಾದವರು ಬಾಯಿ ಬಿಟ್ಟು ಮಾತನಾಡಿ, ಕರ್ನಾಟಕದ ಹಿತಾಸಕ್ತಿ ಪಾಲನೆಗೆ ಕೆಲಸ ಮಾಡಲಿ. ಹೀಗಾಗಿ ಸಂಸದರ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ಕೆಂಪೇಗೌಡರ ಆಚಾರ, ವಿಚಾರ, ಪ್ರಚಾರಕ್ಕೆ ಅನುದಾನ :
ನಾಡಪ್ರಭು ಕೆಂಪೇಗೌಡರ ಆಚಾರ, ವಿಚಾರ, ಪ್ರಚಾರಕ್ಕೆ ಶಾಲಾ-ಕಾಲೇಜುಗಳಲ್ಲಿ ಅಧ್ಯಯನ ವಿಚಾರ ಸಂಕಿರಣ ಹಾಗೂ ಚರ್ಚಾ ಸ್ಪರ್ಧೆ ನಡೆಸಲು ಒಂದು ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗುವುದು.ಜಯಂತಿ ಕಾರ್ಯಕ್ರಮವನ್ನು ದೊಡ್ಡದಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 25 ಸಾವಿರ ರೂ.ಗಳನ್ನುಮಾತ್ರ ನೀಡಲಾಗುತ್ತದೆ. ಬಿಬಿಎಂಪಿಯಿಂದ ಹೆಚ್ಚುವರಿಯಾಗಿ 1 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ನಿರ್ಮಿಸಿದ ಬೆಂಗಳೂರಿನಲ್ಲಿ ಇಂದು ಎಲ್ಲಾ ಜಾತಿಯ ಜನರೂ ಇದ್ದಾರೆ ಎಂದು ಹೇಳಿದರು.
ದೇವನಹಳ್ಳಿಯಲ್ಲಿ 10 ಎಕರೆ, ಮಾಗಡಿ ರಸ್ತೆಯಲ್ಲಿ 5 ಎಕರೆ ಸ್ಥಳ ನಿಗದಿ ಮಾಡಲಾಗಿದ್ದು, ಬೆಂಗಳೂರು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಅಲ್ಲಿ ಭವ್ಯ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರು.
ತಪ್ಪು ಸರಿಪಡಿಸುತ್ತೇವೆ :
ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಅಪಮಾನ ಮಾಡಲಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ ಮಾಡುವವರು ಮಾಡಲಿ, ನಾವು ಯಾರನ್ನೂ ಅಗೌರವಿಸುವುದಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿಗಳ ಪೈಕಿ ಎಸ್.ಎಂ.ಕೃಷ್ಣ, ಸದಾನಂದಗೌಡರು, ದೇವೇಗೌಡರು, ಕುಮಾರಸ್ವಾಮಿ ಆಗಿದ್ದಾರೆ. ಆ ಸಮಾಜದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಶಿಷ್ಟಾಚಾರ. ನಾನು ಸ್ವಲ್ಪ ಕಾರ್ಯದೊತ್ತಡದಲ್ಲಿದ್ದೆ. ಅಧಿಕಾರಿಗಳು ಶಿಷ್ಟಾಚಾರವನ್ನು ಪಾಲಿಸಿಲ್ಲ ಎಂದು ಹೇಳಿದರು.
ದೇವೇಗೌಡರು ಹಾಸನವನ್ನು, ಕುಮಾರಸ್ವಾಮಿಯವರು ಮಂಡ್ಯವನ್ನು ತವರು ಕ್ಷೇತ್ರ ಮಾಡಿಕೊಂಡಿದ್ದಾರೆ. ಪ್ರಾಧಿಕಾರ ಬೆಂಗಳೂರಿನ ವ್ಯಾಪ್ತಿಯಲ್ಲಿ ಶಿಷ್ಟಾಚಾರವನ್ನು ಪಾಲಿಸಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಹೆಸರನ್ನು ಹಾಕಲಾಗಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಅವರ ಹೆಸರನ್ನು ಹಾಕಬಾರದು ಎಂಬ ಉದ್ದೇಶವಿಲ್ಲ. ಮುಂದಿನ ಬಾರಿ ತಪ್ಪನ್ನು ಸರಿಪಡಿಸಲಾಗುವುದು ಎಂದರು.
ಕೆಂಪೇಗೌಡರ ಜಯಂತಿಗೆ ಬೇರೆ ಸಮುದಾಯದ ಸ್ವಾಮೀಜಿಗಳನ್ನು ಕರೆಯಲು ಸೂಚನೆ ನೀಡಿದ್ದೇವೆ. ಕೆಂಪೇಗೌಡರು ಒಕ್ಕಲಿಗರಿಗೆ ಮಾತ್ರ ಆಸ್ತಿಯಲ್ಲ. ಅವರು ನಿರ್ಮಿಸಿದ ಬೆಂಗಳೂರು ಎಲ್ಲರಿಗೂ ಸೇರಿದೆ. ವೃತ್ತಿ ಆಧಾರಿತವಾಗಿ ಬೆಂಗಳೂರು ನಿರ್ಮಿಸಿದ ಧೀಮಂತರು ಕೆಂಪೇಗೌಡರು ಎಂದು ಹೇಳಿದರು.