ಬೆಳಗಾವಿ,ಜೂ.28- ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದಾದರೆ ವೀರಶೈವ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಯವರು ಒತ್ತಾಯಿಸಿದ್ದಾರೆ.
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯ ಪ್ರಮುಖ ಪಾತ್ರ ವಹಿಸಿದೆ. ಪೂರ್ವನಿರ್ಧರಿತ ಒಡಂಬಡಿಕೆಗಳಿದ್ದರೆ ಅದರ ಪ್ರಕಾರ ನಡೆದುಕೊಳ್ಳುವುದಕ್ಕೆ ನಮ ಅಭ್ಯಂತರವಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಸಂದರ್ಭದಲ್ಲಿ ವೀರಶೈವ ಸಮುದಾಯವನ್ನು ಕಡೆಗಣಿಸಬಾರದು ಎಂದರು.ಎಂ.ಡಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಸಮುದಾಯದ ಎಲ್ಲಾ ಸಚಿವರು ಸರ್ಕಾರದಲ್ಲಿ ತಮ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ನಿಟ್ಟಿನಲ್ಲಿ ಕಾಶಿ ಪೀಠ, ಉಜ್ಜಯಿನಿ ಪೀಠ ಸೇರಿ ಪಂಚಪೀಠಗಳ ಜೊತೆ ಈ ಕುರಿತು ಚರ್ಚೆ ನಡೆಸಿದ್ದೇವೆ. ಅವರೂ ಕೂಡ ಈ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ನಿನ್ನೆ ಕೆಂಪೇಗೌಡ ಜಯಂತಿಯ ವೇಳೆ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಅನುಭವಿಸಿದ್ದಾರೆ.
ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟು ಸಹಕಾರ ನೀಡಬೇಕೆಂದು ಹೇಳಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈಗ ಅದರ ಬೆನ್ನಲ್ಲೇ ಪಂಚಪೀಠಗಳಿಂದ ವೀರಶೈವ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಬಂದಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.