Monday, November 25, 2024
Homeರಾಜ್ಯರಾಜ್ಯದಲ್ಲಿ ಮರಣ ಮೃದಂಗ ಬಾರಿಸುತ್ತಿದೆ ಡೆಂಘೀ, ಚಿಕೂನ್‌ಗುನ್ಯಾ

ರಾಜ್ಯದಲ್ಲಿ ಮರಣ ಮೃದಂಗ ಬಾರಿಸುತ್ತಿದೆ ಡೆಂಘೀ, ಚಿಕೂನ್‌ಗುನ್ಯಾ

ಬೆಂಗಳೂರು,ಜೂ.29- ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಡೆಂಘೀ ಮರಣ ಮೃದಂಗ ಬಾರಿಸುತ್ತಿದೆ. ರಾಜ್ಯದಲ್ಲಿ ಇದುವರೆಗೂ ಏಳು ಮಂದಿ ಈ ಮಾರಕ ರೋಗಕ್ಕೆ ಬಲಿಯಾಗಿರುವುದು ಪತ್ತೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 27 ವರ್ಷದ ಯುವಕ ಹಾಗೂ 80 ವರ್ಷದ ವೃದ್ದೆ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ ಡೆಂಘೀ ಬಗ್ಗೆ ಅಗತ್ಯ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜ್ವರದಿಂದ ಬಳಲುತ್ತಿದ್ದ ಸಿ.ವಿ. ರಾಮನ್ ನಗರದ ವಾಸಿ ಅಭಿಲಾಷ್ (27) ಜೂನ್
25 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಡೆಂಘೀ ಸೋಂಕು ಇರುವುದು ದಢಪಟ್ಟಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಜೂ.27 ರಂದು ಮತಪಟ್ಟಿದ್ದರು.

ಅದೇ ರೀತಿ ತಮಿಳುನಾಡಿನ ಮೂಲದ ನೀರಜಾದೇವಿ (80) ಡೆಂಘೀಗೆ ಬಲಿಯಾಗಿದ್ದಾರೆ. ಇವರು ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ನಗರಕ್ಕೆ ಬಂದಿದ್ದರು. ಜೂನ್ 20 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಈ ವೇಳೆ ಅವರಿಗೆ ಡೆಂಘೀ ಇರುವುದು ತಿಳಿದುಬಂದು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದರು.

ರಾಜ್ಯದಲ್ಲಿ ಈವರೆಗೆ ಒಟ್ಟು 5,749 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬಿಬಿಎಂಪಿ ಹೊರತು ಪಡಿಸಿ ರಾಜ್ಯದಲ್ಲಿ 4,364 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಅದರಲ್ಲೂ ಸಿಲಿಕಾನ್ ಸಿಟಿಯಂತೂ ಡೆಂಘೀ ಸೋಂಕಿನಿಂದ ನರಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲೇ ಕಳೆದ 2023ರಲ್ಲಿ ಜನವರಿಯಿಂದ ಜೂನ್ ವರೆಗೆ ಒಟ್ಟು 732 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ 1385 ಪ್ರಕರಣಗಳು ವರದಿಯಾಗಿವೆ. ಕಳೆದ ಬಾರಿಗಿಂತ ದುಪ್ಪಟ್ಟಾಗಿರುವ ಡೆಂಘೀ ಪ್ರಕರಣಗಳು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.

ಇನ್ನುರಾಜ್ಯದಲ್ಲಿ ಡೆಂಘೀಗೆ ಒಟ್ಟು 5 ಮಂದಿ ಬಲಿಯಾಗಿದ್ದಾರೆ. ಡೆಂಘೀ ಜೊತೆ ಚಿಕನ್ಗುನ್ಯಾ ಕೂಡ ಹೆಚ್ಚುತ್ತಿರುವುದು ಆತಂಕ ದುಪ್ಪಟ್ಟು ಮಾಡಿದೆ. ರಾಜ್ಯದಲ್ಲಿ ಈವರೆಗೂ ಒಟ್ಟು 897 ಚಿಕನ್ ಗುನ್ಯಾ ಪ್ರಕರಣಗಳು ವರದಿಯಾಗಿರುವುದೂ ಬೆಳಕಿಗೆ ಬಂದಿರುವುದು ಇಷ್ಟೆಲ್ಲಾ ಆತಂಕಕ್ಕೆ ಕಾರಣವಾಗಿದೆ.

ಡೆಂಘೀಗೆ ಬಾಲಕಿ ಬಲಿ..
ಚಿಕ್ಕಮಗಳೂರು, ಜೂ.29- ಡೆಂಘೀ ಮಹಾಮಾರಿಗೆ ಆರು ವರ್ಷದ ಬಾಲಕಿ ಮೃತಪಟ್ಟಿದ್ದು, ಸ್ಥಳೀಯ ಜನತೆ ಆತಂಕಗೊಂಡಿದ್ದಾರೆ. ಕಡೂರು ತಾಲ್ಲೂಕಿನ ಸಖರಾಯಪಟ್ಟಣ ದಲ್ಲಿ ಸಾನಿಯಾ(6) ಡೆಂಘೀ ಸೋಂಕಿನಿಂದ ಮೃತಪಟ್ಟ ಬಾಲಕಿ.ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾನಿಯಾಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾನಿಯಾ ಮೃತಪಟ್ಟಿದ್ದಾಳೆ.

ತಂದೆಯ ಮನವಿ: ಡೆಂಘಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯ ದೊರಕುವಂತಾಗಬೇಕು. ತಮ ಮಗಳಿಗೆ ಆದ ಸ್ಥಿತಿ ಬೇರೆ ಮಕ್ಕಳಿಗೆ ಆಗಬಾರದು ಎಂದು ಸಾನಿಯಾ ತಂದೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಸರ್ಕಾರ ನಮಗೆ ಪರಿಹಾರ ಕೊಡುವುದು ಬೇಡ. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘಿ ಸೇರಿದಂತೆ ವಿವಿಧ ಮಾರಣಾಂತಿಕ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಮನವಿ ಮಾಡಿದ್ದಾರೆ.ಸಖರಾಯಪಟ್ಟಣದಲ್ಲಿ ಡೆಂಘಿಗೆ ಬಾಲಕಿ ಮೃತಪಟ್ಟಿ ವಿಷಯ ತಿಳಿದು ಸುತ್ತಮುತ್ತಲ ನಿವಾಸಿಗಳು ಆತಂಕಗೊಂಡಿದ್ದಾರೆ.

RELATED ARTICLES

Latest News