Sunday, October 6, 2024
Homeರಾಜ್ಯವಾಲ್ಮೀಕಿ ನಿಗಮ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೇಯೇ ಇಲ್ಲ : ಪರಮೇಶ್ವರ್‌

ವಾಲ್ಮೀಕಿ ನಿಗಮ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೇಯೇ ಇಲ್ಲ : ಪರಮೇಶ್ವರ್‌

ಬೆಂಗಳೂರು,ಜು.1- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಗರಣದ ಬಗ್ಗೆ ಎಸ್‌‍ಐಟಿ ಮತ್ತು ಸಿಬಿಐನಿಂದ ಪ್ರತ್ಯೇಕವಾದ ತನಿಖೆ ನಡೆಯುತ್ತಿದೆ.

ಸಿಬಿಐನವರು ಬ್ಯಾಂಕಿನಲ್ಲಾಗಿರುವ ಹಗರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎಸ್‌‍ಐಟಿ ಇಲಾಖೆ ಲೋಪಗಳ ಬಗ್ಗೆ ವಿಚಾರಣೆ ನಡೆಸುತ್ತದೆ. ಈ ಎರಡೂ ತನಿಖೆಯ ವರದಿಗಳು ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಅದು ಅಧಿಕಾರಿಗಳೇ ಇರಲಿ, ರಾಜಕಾರಣಿಗಳೇ ಇರಲಿ, ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವರದಿ ಬರುವವರೆಗೂ ಯಾರ ಪಾತ್ರದ ಬಗ್ಗೆಯೂ ಸ್ಪಷ್ಟತೆ ಇಲ್ಲ. ತನಿಖೆ ಪೂರ್ಣಗೊಳ್ಳುವವರೆಗೂ ತಾಳೆಯಿಂದ ಇರಿ ಎಂದು ಹೇಳಿದರು.

ಡಿಸಿಎಂ ಹುದ್ದೆಗಾಗಿ ನಮಲ್ಲಿ ಯಾವುದೇ ಕಿತ್ತಾಟಗಳಿಲ್ಲ. ಜನಾದೇಶ ನೀಡಿದಂತೆ ನಮ ಸರ್ಕಾರ ಅಭಿವೃದ್ಧಿ ಕೆಲಸದತ್ತ ಗಮನ ಹರಿಸಿದೆ. ಬಿಜೆಪಿಯವರು ಅನಗತ್ಯವಾಗಿ ನಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನೀರಾವರಿ, ರಸ್ತೆ ಅಭಿವೃದ್ಧಿ, ಕಂದಾಯ ಇಲಾಖೆ ಸೇರಿದಂತೆ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಿಂತಿಲ್ಲ.

ಜೊತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೂ ಕೂಡ ಮುಂದುವರೆಸಲಾಗಿದೆ ಎಂದು ತಿಳಿಸಿದರು. ಬಿಜೆಪಿ ನಾಯಕರುಗಳ ನಡುವೆ ಹೊಂದಾಣಿಕೆ ಇಲ್ಲ. ಪರಸ್ಪರ ಅವರೇ ಕಚ್ಚಾಡುತ್ತಿದ್ದಾರೆ. ನಮ ಬಗ್ಗೆ ಹೇಳಿಕೆ ನೀಡುವುದು ಹಾಸ್ಯಾಸ್ಪದ ಎಂದರು. ಇಂದಿನಿಂದ ನೂತನ ಅಪರಾಧ ಮತ್ತು ನ್ಯಾಯ ಕಾನೂನುಗಳು ದೇಶಾದ್ಯಂತ ಜಾರಿಯಾಗುತ್ತಿದೆ. ರಾಜ್ಯಸರ್ಕಾರ ಅವುಗಳ ಅನುಷ್ಠಾನಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದೆ.

ಕಾನ್‌್ಸಟೇಬಲ್‌ನಿಂದ ಅಧಿಕಾರಿಗಳವರೆಗೂ ಎಲ್ಲರಿಗೂ ತರಬೇತಿ ನೀಡಲಾಗುವುದು. ವಿಶೇಷವಾದ ಆ್ಯಪ್‌ ಸಿದ್ಧಪಡಿಸಲಾಗಿದ್ದು, ಕಾನೂನು ಕಾಯ್ದೆಗಳ ಪರಿಚಯವಾಗುವವರೆಗೂ ಸುಲಭವಾಗಿ ಅರ್ಥೈಸುವಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಹೊಸ ಕಾನೂನುಗಳ ಯಶಸ್ಸು ಅಥವಾ ವೈಫಲ್ಯಗಳ ಬಗ್ಗೆ ತಕ್ಷಣವೇ ಏನೂ ಹೇಳಲು ಸಾಧ್ಯವಿಲ್ಲ. ಇಂದಿನಿಂದ ಹೊಸ ಕಾನೂನುಗಳ ಪ್ರಕಾರ, ಪ್ರಕರಣ ದಾಖಲಿಸಲಾಗುವುದು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ಕಾನೂನುಗಳ ಸಫಲತೆ ಅಥವಾ ಲೋಪಗಳ ಬಗ್ಗೆ ಚರ್ಚೆಯಾಗಲಿದೆ. ಅಗತ್ಯವಿದ್ದರೆ ತಿದ್ದುಪಡಿ ತರಲೂ ಕೂಡ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು.

ಪೊಲೀಸ್‌‍ ಸಿಬ್ಬಂದಿಗಳ ಅಂತರ್‌ಜಿಲ್ಲಾ ವರ್ಗಾವಣೆಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಿಂದ ಬಂದು ಬೆಂಗಳೂರಿನಲ್ಲಿ ಪೊಲೀಸ್‌‍ ಸೇವೆಯಲ್ಲಿ ಸೇರಿದವರಿಗೆ ಮರಳಿ ತವರಿನತ್ತ ಹೋಗಲು ಅವಕಾಶ ಇಲ್ಲದಂತಾಗಿದೆ. ಆರೋಗ್ಯ ಸಮಸ್ಯೆ, ಪೋಷಕರ ಅವಲಂಬನೆ, ಪತಿ-ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆಗೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ಪರಿಷ್ಕರಿಸುವುದಾಗಿ ಹೇಳಿದರು.

ಸರೋಜಿನಿ ಮಹಿಷಿ ವರದಿ ಅನುಷ್ಠಾನ ಕುರಿತು ಕರವೇ ಅಧ್ಯಕ್ಷ ನಾರಾಯಣಗೌಡ ಅವರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಉದ್ದೇಶ ಸರಿಯಾಗಿದ್ದರೆ ಸರ್ಕಾರ ಗಮನ ಹರಿಸಲಿದೆ. ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಈಗಾಗಲೇ ನಿರ್ದೇಶನ ನೀಡಿರುವುದಾಗಿ ಹೇಳಿದರು.

RELATED ARTICLES

Latest News