ಬೆಂಗಳೂರು,ಜು.2- ಕರ್ನಾಟಕ ಹಾಲು ಒಕ್ಕೂಟ – ಕೆಎಂಎಫ್ ನಿಂದ ಒಂದು ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಸಂಗ್ರಹ ಸಂಭ್ರಮಾಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಈ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಳೆದ ವರ್ಷ ಇದೇ ಅವಧಿಗೆ ದಿನವೊಂದಕ್ಕೆ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಅದು ಈಗ ಒಂದು ಕೋಟಿ ಲೀಟರ್ಗೆ ತಲುಪಿದೆ. ಹಾಲು ಉತ್ಪಾದನೆ ಹೆಚ್ಚಾಗಿರುವುದರಿಂದ ಹೈನುಗಾರರಿಂದ ಅದನ್ನು ಖರೀದಿಸಲೇಬೇಕು.
ಖರೀದಿಸಲಾಗುವುದಿಲ್ಲ ಎಂದು ನಿರಾಕರಿಸಲಾಗುವುದಿಲ್ಲ ಅಥವಾ ಹಾಲನ್ನು ಚೆಲ್ಲಲೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಪ್ಯಾಕೆಟ್ಗೆ 50 ಎಂಎಲ್ ಹಾಲನ್ನು ಸೇರಿಸಿ ಅದಕ್ಕೆ ತಗಲುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ. ಇದರಿಂದ ರೈತರಿಗೆ ಲಾಭವಾಗುತ್ತಿದೆ. ಹೊರೆಯಾಗುವುದಿಲ್ಲ ಅಥವಾ ನಷ್ಟವಾಗುವುದಿಲ್ಲ. ಬಿಜೆಪಿಯವರು ರೈತ ವಿರೋಧಿಗಳು. ಹಸು, ಎಮೆ ಸಾಕುವ ಹೈನುಗಾರರು ರೈತರಾಗಿದ್ದಾರೆ ಎಂದು ವಿವರಿಸಿದರು.
ಈ ಹಿಂದೆ ತಾವು ಪಶುಸಂಗೋಪನೆ ಸಚಿವರಾಗಿದ್ದಾಗ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಕೆಎಂಎಫ್ನ ವ್ಯಾಪ್ತಿಗೊಳಪಡಿಸಿದ್ದೇನೆ. ಪ್ರಸ್ತುತ 16,500 ಸಹಕಾರ ಸಂಘಗಳು ಹಾಲು ಸಂಗ್ರಹಿಸುತ್ತಿವೆ. ಸಹಕಾರ ಕ್ಷೇತ್ರದಲ್ಲಿ ಹೈನೋದ್ಯಮ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಿದೆ. ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪ್ರತೀ ಲೀಟರ್ಗೆ 2 ರೂ.ಗಳನ್ನು ಹೆಚ್ಚಿಸಿದ್ದಾಗಿ ಹೇಳಿದರು.
ವಿರೋಧಪಕ್ಷಗಳಿಗೆ ಸರಿಯಾದ ಮಾಹಿತಿ ಇಲ್ಲ. ಅನಗತ್ಯವಾಗಿ ಹಾಲಿನ ಬೆಲೆ ಏರಿಕೆಯೆಂದು ಬಿಂಬಿಸಿ ಟೀಕೆ ಮಾಡುತ್ತಿವೆ ಎಂದು ಆಕ್ಷೇಪಿಸಿದರು.ಹಾಲು ಉತ್ಪಾದಕರಿಗೆ ಬಾಕಿ 700 ಕೋಟಿ ರೂ. ಬಾಕಿ ಉಳಿದಿದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಬಾಕಿಯನ್ನು ಉಳಿಸಿ ಹೋಗಲಾಗಿತ್ತು. ಅದನ್ನು ನಮ ಸರ್ಕಾರ ಹಂತಹಂತವಾಗಿ ಪಾವತಿಸುತ್ತಿದೆ ಎಂದು ಹೇಳಿದರು.
ಸಚಿವರಾದ ಕೆ.ಎನ್.ರಾಜಣ್ಣ, ಜಮೀರ್ ಅಹಮದ್, ಕೆ.ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್‌್ಕ, ಶಾಸಕರಾದ ಎಂ.ಆರ್.ಸೀತಾರಾಮ್, ಗೋಪಾಲಕೃಷ್ಣ ಬೇಳೂರು, ನಜೀರ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.