ನವದೆಹಲಿ,ಜು.2- ಸಂಸತ್‌ನಲ್ಲಿ ನಾನು ಮಾತನಾಡಿದ ಕೆಲ ಮಾತುಗಳನ್ನು ಉದ್ದೇಶಪೂರ್ವಕವಾಗಿ ಕಡತದಿಂದ ತೆಗೆದುಹಾಕಲಾಗಿದೆ ಎಂದು ವಿಪಕ್ಷ ನಾಯಕ ರಾಹುಲ್‌ಗಾಂಧಿ ಆರೋಪಿಸಿದ್ದಾರೆ. ಇಂತಹ ಘಟನೆಗಳು ನಡೆಯಲು ಮೋದಿ ಅವರ ಕಾಲದಲ್ಲಿ ಮಾತ್ರ ಸಾಧ್ಯ ಇನ್ನು ಏನೇನು ತೆಗೆದು ಹಾಕುತ್ತಾರೋ ನೋಡೋಣ ಎಂದು ಅವರು ಹರಿಹಾಯ್ದಿದ್ದಾರೆ.
ಮೋದಿ ಅವರ ಕಾಲದಲ್ಲಿ ಸತ್ಯವನ್ನು ತೆಗೆದು ಹಾಕಲಾಗಿದೆ. ಆದರೆ ನಿಜವಾಗಿಯು ಸತ್ಯವನ್ನು ತೆಗೆದುಹಾಕಲು ಸಾಧ್ಯವಿಲ್ಲ. ನಾನು ಏನು ಹೇಳಬೇಕಿತ್ತು ಅದನ್ನೇ ಹೇಳಿದ್ದೇನೆ. ಅದೇ ಸರಿ, ಸತ್ಯ. ಅವರು ಏನನ್ನಾದರೂ ತೆಗೆದು ಹಾಕಲಿ. ಸತ್ಯ ಸತ್ಯವೇ ಆಗಿರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಆರಂಭಗೊಂಡ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಿಜೆಪಿ ಜಾತಿವಾದಿ ಪಕ್ಷ ಎಂದು ಜರಿದಿದ್ದರು. ಜಾತಿ ಆಧಾರದ ಮೇಲೆ ದೇಶವನ್ನು ಬಿಜೆಪಿ ಒಡೆಯುತ್ತಿದೆ ಎಂದು ಆರೋಪಿಸಿದ್ದರು.
ಅಲ್ಲದೆ ಕುರಾನ್ ಹೇಳಿಕೆಗಳನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿ, ಶಿವ, ಗುರು ನಾನಕ್, ಕ್ರಿಸ್ತನ ಫೋಟೊಗಳನ್ನು ತೋರಿಸಿದ್ದರು. ಈ ಭಗವಂತರು ಹೇಳಿದ್ದು ಎಲ್ಲ ಧರ್ಮಗಳು ಒಂದೇ ಎಂದು. ಆದ್ದರಿಂದ ಹೆದರುವ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದ್ದರು.
ಅಗ್ನಿಪಥ್ ನೇಮಕದ ಬಗ್ಗೆ ಮಾತನಾಡಿದ ರಾಹುಲ್, ಅಗ್ನಿವೀರ್ ನೇಮಕ ದೇಶದ ಸೇನೆಗಲ್ಲ ಬದಲಿಗೆ ಪ್ರಧಾನಿ ಕಚೇರಿ ರಕ್ಷಣೆಗೆ ಸೀಮಿತವಾಗಿದೆ ಎಂದು ಹರಿಹಾಯ್ದಿದ್ದರು.