ಬೆಂಗಳೂರು,ಜು.3- ದೇಶದ ಆಂತರಿಕ ಕ್ಷೋಭೆ ಯನ್ನು ಹತ್ತಿಕ್ಕಲು ಆಗಿನ ಪ್ರಧಾನಿ ಇಂದಿರಾ ಗಾಂಧಿ ಯವರು ತುರ್ತು ಪರಿಸ್ಥಿತಿ ಯನ್ನು ಜಾರಿ ಗೊಳಿಸಿದ್ದರು. ಇದು ಸಂವಿಧಾನ ಬಾಹಿರ ವಾಗಿರಲಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸಮರ್ಥಿಸಿ ಕೊಂಡಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸರ್ಕಾರ ರಚನೆ ವೇಳೆ ರಾಷ್ಟ್ರಪತಿಯವರು ಸಂಸತ್‌ನ ಜಂಟಿ ಅಧಿವೇಶನದಲ್ಲಿ ತಮ ಭವಿಷ್ಯದ ಯೋಜನೆಗಳನ್ನು ಪ್ರಸ್ತಾಪಿಸಿ ವಿವರಣೆ ನೀಡುವುದು ಸಾಮಾನ್ಯ. ಆದರೆ ಈ ಬಾರಿ ನರೇಂದ್ರ ಮೋದಿಯವರ ಸರ್ಕಾರ ರಾಷ್ಟ್ರಪತಿಯವರಿಂದ ಮಾಡಿಸಿರುವ ಭಾಷಣದಲ್ಲಿ ತುರ್ತು ಪರಿಸ್ಥಿತಿಯನ್ನು ಪ್ರಸ್ತಾಪ ಮಾಡಿರುವುದು ಖಂಡನೀಯ.
ದೇಶದ ಒಳಗೆ ಮತ್ತು ಹೊರಗೆ ರಾಷ್ಟ್ರವಿರೋಧಿ ಶಕ್ತಿಗಳು ವಿಜೃಂಭಿಸಿದಾಗ ಸುರಕ್ಷತಾ ದೃಷ್ಟಿಯಿಂದ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಲು ಸಂವಿಧಾನದಲ್ಲಿ ಅವಕಾಶ ವಿದೆ. ಹೀಗಾಗಿ ಶ್ರೀಮತಿ ಇಂದಿರಾ ಗಾಂಧಿಯವರು ಜಾರಿಗೊಳಿಸಿದ ತುರ್ತು ಪರಿಸ್ಥಿತಿ ಸಂವಿಧಾನ ಬಾಹಿರ ವಲ್ಲ ಎಂದು ಸಮರ್ಥಿಸಿ ಕೊಂಡರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಕಾಂಗ್ರೆಸ್ ಸರ್ಕಾರ ಸಮಾಜ ಘಾತುಕ ಶಕ್ತಿಗಳು, ಕಳ್ಳ ಸಾಗಣಿಕೆದಾರರು, ರಾಷ್ಟ್ರದ ಸಂವಿಧಾನವನ್ನು ಬುಡಮೇಲು ಮಾಡಲು ಯತ್ನಿಸಿದವರನ್ನು ಜೈಲಿಗೆ ಹಾಕಲಾಗಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ವಿವಿಧ ರಾಜ್ಯದ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದೆ. ವಿಪಕ್ಷ ನಾಯಕರ ಮೇಲೆ ಹಗೆತನ ಸಾಧಿಸುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ವಾಜಪೇಯಿ ಅವರನ್ನು ಗೃಹಬಂಧನದಲ್ಲಿಡಲಾಗಿತ್ತು. ಈಗ ಕೇಂದ್ರ ಸರ್ಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬುದು ಎಲ್ಲರ ಕಣ್ಣೆದುರಿಗಿದೆ ಎಂದು ನುಡಿದರು.
ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಲು ತುರ್ತು ಪರಿಸ್ಥಿತಿ ಹೇರಿದ್ದ ರಲ್ಲಿ ತಪ್ಪಿಲ್ಲ. ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿ ವಿರುದ್ಧ ತೀರ್ಪು ನೀಡುತ್ತದೆ. ತೀರ್ಪು ನೀಡಿದ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ಗೆ ಮೇಲನವಿ ಸಲ್ಲಿಸಲು 7 ವಾರಗಳ ಕಾಲಾವಕಾಶ ನೀಡಿದರು. ಸುಪ್ರೀಂಕೋರ್ಟ್ ಕೂಡ ಇಂದಿರಾ ಗಾಂಧಿಯವರನ್ನು ಪ್ರಧಾನಿ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡುತ್ತದೆ ಎಂದು ಹೇಳಿದರು.
ಜಯಪ್ರಕಾಶ್ ನಾರಾಯಣ್ ಅವರು ಇಂದಿರಾಗಾಂಧಿಯವರ ವಿರುದ್ಧ ಪ್ರಜಾಸತ್ತಾತಕ ಹೋರಾಟ ನಡೆಸುವ ಬದಲಾಗಿ ಸೇನೆ ಹಾಗೂ ಇತರ ಸಶಸ್ತ್ರ ಪಡೆಗಳಿಗೆ ದಂಗೆ ಏಳಲು ಕರೆ ನೀಡುತ್ತಾರೆ. ಹೀಗಾಗಿ ಅನಿವಾರ್ಯವಾಗಿ ತುರ್ತು ಪರಿಸ್ಥಿತಿ ಹೇರಬೇಕಾಗುತ್ತದೆ. ಕೊನೆಗೆ ಅದನ್ನು ಹಿಂದೆ ಪಡೆದಿದ್ದೂ ಕೂಡ ಇಂದಿರಾ ಗಾಂಧಿಯವರೇ ಎಂದು ವಿವರಿಸಿದರು.
ತುರ್ತು ಪರಿಸ್ಥಿತಿ ಜಾರಿಯಲ್ಲಿ ಯಾವುದೇ ಸಂವಿಧಾನ ಉಲ್ಲಂಘನೆ ಯಾಗಿರಲಿಲ್ಲ. ಕಾಂಗ್ರೆಸ್ ಎಂದೂ ಸಂವಿಧಾನಕ್ಕೆ ವಿರುದ್ಧವಾಗಿ ನಡೆದು ಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.