ಬೆಂಗಳೂರು, ಜು.4- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಇಂದು ಮುಗಿದಿದ್ದು, ನ್ಯಾಯಾಲಯದ ಮುಂದೆ ತನಿಖಾಧಿಕಾರಿಗಳು ಹಾಜರುಪಡಿಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿ ಮುಗಿಯುತ್ತಿದ್ದಂತೆ ಜೂನ್ 22ರಂದು ದರ್ಶನ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಈ ಅವಧಿ ಇಂದಿಗೆ ಅಂತ್ಯಗೊಂಡಿದ್ದು, ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಇಂದು ದರ್ಶನ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.ಸಾಕ್ಷ್ಯಾಧಾರಗಳ ಆಧಾರದಲ್ಲಿ ಇಂದು ನಟ ದರ್ಶನ್ ಮತ್ತೆ ನ್ಯಾಯಾಂಗ ಬಂಧನ ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ದರ್ಶನ್ ಜೊತೆಗೆ ಆತನ ಗೆಳತಿ ಪವಿತ್ರಾಗೌಡ, ಚಿತ್ರದುರ್ಗದ ಡಿ ಬಾಸ್ ಅಭಿಮಾನಿ ಸಂಘದ ಅಧ್ಯಕ್ಷ ರಘು ಸೇರಿ 18 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಇವರೆಲ್ಲರ ನ್ಯಾಯಾಂಗ ಬಂಧನದ ಅವಧಿ ಇಂದು ಕೊನೆಗೊಂಡಿದೆ.ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯನ್ನು ದರ್ಶನ್ ಆಂಡ್ ಗ್ಯಾಂಗ್‌ನಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಹಾಜರು ಸಾಧ್ಯತೆ:
ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ನಟ ದರ್ಶನ್‌ನನ್ನು ಕೋರ್ಟ್‌ಗೆ ಪೊಲೀಸರು ಹಾಜರುಪಡಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಬದಲಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಆರೋಪಿ ದರ್ಶನ್‌ನನ್ನು ಕರೆತರುವಾಗ ಅಭಿಮಾನಿಗಳು ಗುಂಪು ಸೇರಬಹುದು. ಮತ್ತೊಂದೆಡೆ ಜಾಮೀನು ಅರ್ಜಿ ಹಾಕದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಕೇಳುವ ಸಾಧ್ಯತೆಯೂ ಇಲ್ಲ. ಹೀಗಾಗಿ ಕೋರ್ಟ್‌ಗೆ ವಿಚಾರಣೆಗೆಂದು ಹಾಜರು ಪಡಿಸುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಜಾಮೀನಿಗಾಗಿ ಹರಸಾಹಸ:
ಇತ್ತ ದರ್ಶನ್‌ನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸಪಡುತ್ತಿದ್ದಾರೆ. ವಕೀಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.