ಲಖ್ನೋ,ಜು.4- ಉತ್ತರಪ್ರದೇಶದ ಹತ್ರಾಸ್ ಜಿಲ್ಲೆ ಮೊಘಲ್ ಘರಾಹಿ ಗ್ರಾಮದಲ್ಲಿ ನಡೆದ ಕಾಲ್ತುಳಿತಕ್ಕೆ ಕೆಲವು ಸಮಾಜಘಾತುಕ ಶಕ್ತಿಗಳು ಕಾರಣ ಎಂದು ನಾಪತ್ತೆಯಾಗಿರುವ ಸ್ವಯಂ ಸ್ವಯಂಘೋಷಿತ ದೇವ ಮಾನವ ನಾರಾಯಣ ಸಾಕಾರ್ ಹರಿ ಆಲಿಯಾಸ್ ಭೋಲೇ ಬಾಬಾ ಆರೋಪಿಸಿದ್ದಾರೆ.
ಬಂಧನದ ಭೀತಿಯಿಂದ ತಲೆಮರೆಸಿಕೊಂಡು ಸದ್ಯ ಅಜ್ಞಾತ ಸ್ಥಳದಲ್ಲಿರುವ ಭೋಲೇ ಬಾಬ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾನು ಸ್ಥಳದಿಂದ ನಿರ್ಗಮಿಸಿದ ಬಹಳ ಸಮಯದ ನಂತರ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ನಾನು ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಮೃತರ ಕುಟುಂಬಕ್ಕೆ ನೋವು ಮರೆಸುವ ಶಕ್ತಿ ಲಭಿಸಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪರಮಾತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಕೆಲವು ಸಮಾಜ ವಿರೋಧಿ ಶಕ್ತಿಗಳು ಸೃಷ್ಟಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ವಕೀಲ ಎ.ಪಿ.ಸಿಂಗ್ ಅವರಲ್ಲಿ ವಿನಂತಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ವರದಿಯಲ್ಲಿ ಏನಿದೆ?
80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು ಎಂದು ವರದಿ ತಿಳಿಸಿದೆ.
ಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ ಎಂದು ತನಿಖೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಕಾಲ್ತುಳಿತದಿಂದ ಮೃತಪಟ್ಟವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಘಟನೆ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ಬುಧವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಮತ್ತು ಗಾಯಾಳುಗಳನ್ನು ಸಂತೈಸಿದ್ದಾರೆ.
ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೃತರ ಮತ್ತು ಗಾಯಗೊಂಡವರ ಕುಟುಂಬಕ್ಕೆ ಕ್ರಮವಾಗಿ 2 ಲಕ್ಷ ರೂ. ಮತ್ತು 50 ಸಾವಿರ ರೂ. ಪರಿಹಾರ ಧನ ಘೋಷಿಸಲಾಗಿದೆ.