ಹಾಸನ,ಜು.5-ರಾಜ್ಯಾದ್ಯಂತ ಮಹಮಾರಿ ಡೆಂಘೀ ರಣಕೇಕೆ ಮುಂದುವರೆದಿದ್ದು, ಹಾಸನದಲ್ಲಿ ಮತ್ತೊಂದು ಬಾಲಕಿ ಶಂಕಿತ ಡೆಂಘೀಗೆ ಬಲಿಯಾಗಿದ್ದಾಳೆ.ಸಮೃದ್ಧಿ(8) ಮೃತಪಟ್ಟ ಬಾಲಕಿ. ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದ ರಮೇಶ್ ಅಶ್ವಿನಿ ದಂಪತಿಯ ಪುತ್ರಿ ಸಮೃದ್ಧಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಮೂರು ದಿನದ ಹಿಂದೆ ಹಿಮ್ಸೌ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಬಾಲಕಿಯನ್ನು ವರ್ಗಾಯಿಸಲಾಗಿತ್ತು. ಆದರೆ ಅಲ್ಲೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಮೃದ್ಧಿ ಮೃತಪಟ್ಟಿದ್ದಾಳೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ ನಾಲ್ವರು ಬಾಲಕಿಯರು ಬಲಿಯಾಗಿದ್ದು, ಜಿಲ್ಲೆಯ ಜನತೆಯಲ್ಲಿ ಭಾರೀ ಆತಂಕ ಉಂಟು ಮಾಡಿದೆ. ಅದರಲ್ಲೂ ಹೊಳೆನರಸೀಪುರ ತಾಲ್ಲೂಕಿನಲ್ಲಿ ಮೂವರು ಮೃತಪಟ್ಟಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಮಹಾಮಾರಿ ಡೆಂಘೀಗೆ ಹಾಸನ ಜಿಲ್ಲೆಯ ಜನತೆ ನಲುಗಿ ಹೋಗಿದ್ದು, ಪ್ರತಿಕ್ಷಣ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.
ಹುಣಸೂರು ವರದಿ:
ಸಾಂಕ್ರಾಮಿಕ ರೋಗಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯಾಧಿಕಾರಿಯೇ ಡೆಂಘೀಗೆ ಬಲಿಯಾಗಿದ್ದಾರೆ.ಹುಣಸೂರು ತಾಲ್ಲೂಕಿನ ಗುರುಪುರ ಉಪಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಗೇಂದ್ರ ಎಂಬುವರು ಕಾರ್ಯ ನಿರ್ವಹಿಸುತ್ತಿದ್ದು, ತಾಲ್ಲೂಕಿನಾದ್ಯಂತ ಡೆಂಘೀ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರು. ಇದೀಗ ಅವರೇ ಡೆಂಘೀಗೆ ಬಲಿಯಾಗಿದ್ದಾರೆ.
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಮೈಸೂರು, ಧಾರವಾಡ, ದಕ್ಷಿಣ ಕನ್ನಡ, ವಿಜಯಪುರ, ಉಡುಪಿ, ಬೆಳಗಾವಿ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಶಂಕಿತ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಶಿಸ್ತು ಕ್ರಮ ತೆಗೆದುಕೊಂಡಿದೆ.