Friday, November 22, 2024
Homeರಾಜ್ಯವರ್ಗಾವಣೆಗೆ ಶಿಫಾರಸು ತರಬೇಡಿ : ಕಮಿಷನರ್ ದಯಾನಂದ ಎಚ್ಚರಿಕೆ

ವರ್ಗಾವಣೆಗೆ ಶಿಫಾರಸು ತರಬೇಡಿ : ಕಮಿಷನರ್ ದಯಾನಂದ ಎಚ್ಚರಿಕೆ

ಬೆಂಗಳೂರು,ಜು.5- ವರ್ಗಾವಣೆಗೆ ಯಾವುದೇ ಶಿಫಾರಸು, ಒತ್ತಡ ತರಬೇಡಿ ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆಡುಗೋಡಿಯ ಸಿಎಆರ್ ಮೈದಾನದಲ್ಲಿ ಹಮಿಕೊಂಡಿದ್ದ ಮಾಸಿಕ
ಕವಾಯಿತಿನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಬಡ್ತಿಯಾಗಲಿ, ವರ್ಗಾವಣೆಯಾಗಲಿ ಪಾರದರ್ಶಕವಾಗಿರಲಿದೆ, ಏಕರೂಪದಲ್ಲಿ ಕೌನ್ಸಿಲಿಂಗ್ ಮೂಲಕ ನಡೆಯಲಿದೆ. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ, ವರ್ಗಾವಣೆಯ ಪಟ್ಟಿ ರೆಡಿಯಾಗುತ್ತಿದೆ. ನಮ ಇಲಾಖೆಯಲ್ಲದೆ ಬೇರೆ ಬೇರೆ ಇಲಾಖೆಗಳಲ್ಲೂ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಈಗಾಗಲೇ ಎಎಸ್ಐ ಮಟ್ಟದ ಅಧಿಕಾರಿಗಳಿಗೆ ಪಿಎಸ್ಐ ಬಡ್ತಿ ನೀಡಲಾಗಿದೆ. ಇದೀಗ ಹೆಡ್ ಕಾನ್ಸ್ಟೇಬಲ್ನಿಂದ ಎಎಸ್ಐ ಹಾಗೂ ಕಾನ್ಸ್ಟೇಬಲ್ನಿಂದ ಹೆಡ್ ಕಾನ್ಸ್ಟೇಬಲ್ಗೆ ಬಡ್ತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಪ್ರಶಂಸೆ:
ನಗರದ ಪೊಲೀಸರ ಕಾರ್ಯತತ್ಪರತೆ ಹಾಗೂ ವೃತ್ತಿ ಕೌಶಲ್ಯವನ್ನು ಪ್ರಶಂಸಿಸಿದ ಆಯುಕ್ತರು, ಇತ್ತೀಚಿನ ಕೆಲವು ಪ್ರಕರಗಳ ತನಿಖೆಯಿಂದಾಗಿ ಪೊಲೀಸರ ವೃತ್ತಿ ಕೌಶಲ್ಯವನ್ನು ಎಲ್ಲಾ ಕಡೆ ಶ್ಲಾಘಿಸಲಾಗುತ್ತಿದೆ. ಇದು ಅಭಿನಂದನಾರ್ಹ ಅಂಶ. ನಗರದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮನ್ನಣೆ ದೊರೆಯುತ್ತಿದೆ. ಇದೊಂದು ಟೀಂ ವರ್ಕ್ ಕೆಲಸಕ್ಕೆ ಸಾಕ್ಷಿ ಎಂದು ಭಾವಿಸಿದ್ದೇನೆ ಎಂದರು.

ಇದೇ ರೀತಿ ವೃತ್ತಿಪರತೆ, ಕರ್ತವ್ಯ ತತ್ಪರತೆ, ಸಮಯ ಪ್ರಜ್ಞೆ, ಎಲ್ಲಾ ವಿಷಯಗಳನ್ನು ನಾವು ಪಾಲನೆ ಮಾಡಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.

ಸ್ವತ್ತಿನ ಅಪರಾಧ ತಡೆಗಟ್ಟಿ:
ಪ್ರಮುಖವಾಗಿ ಅಪರಾಧ ಪ್ರಕರಣಗಳ ಪೈಕಿ ಸ್ವತ್ತಿನ ಅಪರಾಧಗಳ ಆರೋಪಿಗಳನ್ನು ಪತ್ತೆಹಚ್ಚಲು ಕರ್ತವ್ಯ ಪ್ರಜ್ಞೆ ತೋರಿಸಬೇಕು. ಸಾರ್ವಜನಿಕರ ಜೀವನದ ದುಡಿಮೆಯ ಹಣವಾಗಲಿ, ಸ್ವತ್ತು ಇಲ್ಲವೇ ಮನೆಗಳ್ಳತನ,ಮೊಬೈಲ್ ಕಳ್ಳತನ ಪ್ರಕರಣಗಳಿಗೆ ತ್ವರಿತವಾಗಿ ಸ್ಪಂದಿಸಬೇಕು.

ವಸ್ತುಗಳನ್ನು ಕಳೆದುಕೊಂಡವರು ನೊಂದಿರುತ್ತಾರೆ. ಅಂಥವರ ಕಷ್ಟಗಳಿಗೆ ಸ್ಪಂದಿಸಬೇಕು. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದರೆ ಮುಂದೆ ದೊಡ್ಡ ಕ್ರಿಮಿನಲ್ಗಳಾಗುವುದನ್ನು ತಪ್ಪಿಸಬಹುದು ಎಂದರು.

ಸಂಯಮದಿಂದ ವರ್ತಿಸಿ:
ಪೊಲೀಸ್ ಠಾಣೆಗಳಿಗೆ ದೂರು ನೀಡಲು ಬರುವಂತಹ ದೂರುದಾರರು, ಸಾರ್ವಜನಿಕರ ಜೊತೆ ಸಂಯಮದಿಂದ ವರ್ತಿಸಿ ಏರುಧ್ವನಿಯಲ್ಲಿ ಮಾತನಾಡಬೇಡಿ ಎಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.

ಹೊಸ ಕಾನೂನಿನ ಅರಿವಿರಲಿ:
ರಾಜ್ಯದಲ್ಲಿ ಜಾರಿಯಾಗಿರುವ ಮೂರು ಹೊಸ ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕು. ಈ ಕಾನೂನುಗಳನ್ನು ಲೋಪವಾಗದಂತೆ ಸರಿಯಾದ ರೀತಿಯಲ್ಲಿ ಪಾಲಿಸಬೇಕು. ಏನಾದರೂ ಸಮಸ್ಯೆ ಇದ್ದರೆ ಮೇಲಾಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಿರಿ, ಆ ಬಗ್ಗೆ ಚರ್ಚಿಸಿ ತಿಳಿದುಕೊಳ್ಳಿ, ಠಾಣೆಗಳ ಸಿಬ್ಬಂದಿಗಳು ಈ ಮೂರು ಕಾನೂನುಗಳ ಬಗ್ಗೆ ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಿ ಎಂದು ಆಯುಕ್ತರು ಹೇಳಿದರು.

ಕವಾಯತಿನಲ್ಲಿ ಎಲ್ಲಾರೂ ಭಾಗವಹಿಸಿ:
ಪ್ರತಿ ತಿಂಗಳು ಮಾಸಿಕ ಕವಾಯತು ಅನುಷ್ಠಾನಕ್ಕೆ ತರಲಾಗಿದೆ. ನಿರಂತರವಾಗಿ ಕವಾಯತಿನಲ್ಲಿ ಎಲ್ಲಾ ಸಿಬ್ಬಂದಿ ವರ್ಗ ಪಾಲ್ಗೊಳ್ಳಬೇಕು. ಅದರಲ್ಲೂ ದೈನಂದಿನ ಕರ್ತವ್ಯದ ಜೊತೆಗೆ ನಿತ್ಯ ನಿರ್ವಹಿಸುವಂತಹ ಸಂಚಾರ, ರಾತ್ರಿ ಗಸ್ತು, ಠಾಣೆಯಲ್ಲಿನ ಕರ್ತವ್ಯದ ಜೊತೆಗೆ ಕವಾಯತು ಅಭ್ಯಾಸ ಮಾಡಿ ಮುಂದೆಯೂ ನಿರ್ವಹಿಸಿಕೊಂಡು ಹೋಗಬೇಕೆಂದು ಹೇಳಿದರು.

ಇಂದಿನ ಕವಾಯಿತಿನಲ್ಲಿ ಅತ್ಯಂತ ಉತ್ತಮ ಶ್ರೇಣಿಯ ಪ್ರದರ್ಶನವನ್ನು ನೀಡಿದಂತಹ ದೇವರಾಜ್ ಹಾಗೂ ಕವಾಯಿತಿನಲ್ಲಿ ಭಾಗವಹಿಸಿದ್ದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಮಿತ್ರರಿಗೆ ಅಭಿನಂದನೆ ಸಲ್ಲಿಸಿ ಶುಭಾಷಯ ಹೇಳಿದರು.

RELATED ARTICLES

Latest News