Saturday, November 23, 2024
Homeರಾಜ್ಯಹೇಮಾವತಿ ಯೋಜನೆಯ ಸಾಧಕ-ಬಾಧಕ ಅಧ್ಯಯನಕ್ಕೆ ಸಮಿತಿ ರಚನೆ

ಹೇಮಾವತಿ ಯೋಜನೆಯ ಸಾಧಕ-ಬಾಧಕ ಅಧ್ಯಯನಕ್ಕೆ ಸಮಿತಿ ರಚನೆ

ಬೆಂಗಳೂರು, ಜು.6- ಹೇಮಾವತಿ ನಾಲೆಯಿಂದ ಕುಣಿಗಲ್‌ ಹಾಗೂ ಮಾಗಡಿ ತಾಲ್ಲೂಕಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಸಾಧಕ-ಬಾಧಕಗಳು ಹಾಗೂ ತಾಂತ್ರಿಕ ಮಾಹಿತಿ ಅಧ್ಯಯನಕ್ಕೆ ರಾಜ್ಯಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ತಿಂಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿದೆ.

ತುಮಕೂರು ಶಾಖಾ ನಾಲೆಯ ಸರಪಳಿ 70 ಕಿ.ಮೀ.ನಿಂದ ಗುರುತ್ವಾಕರ್ಷಣೆ ಪೈಪ್‌ಲೈನ್‌ ಅವಳಡಿಸುವ ಮುಖಾಂತರ ಶ್ರೀರಂಗ ಕೆರೆ ತುಂಬಿಸುವ ಯೋಜನೆಯ ಮೊದಲನೇ ಹಂತ ಸರಪಳಿ 0 ಕಿ.ಮೀ.ನಿಂದ 17 ನೇ ಕಿ.ಮೀ. ವರೆಗೆ ಹಾಗೂ 2ನೇ ಹಂತ ಸರಪಳಿ 17 ಕಿ.ಮೀ.ನಿಂದ 35.54 ಕಿ.ಮೀ.ವರೆಗೆ ಕಾಮಗಾರಿ ಪ್ರಾರಂಭಿಸಲಾಗಿದೆ.

ಆದರೆ ವಿವಿಧ ರೈತ ಸಂಘಟನೆಗಳು ಜನಪ್ರತಿನಿಧಿಗಳ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಧರಣಿಗಳು ನಡೆಯುತ್ತಿವೆ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜೂ.20 ರಂದು ತುಮಕೂರು ಜಿಲ್ಲಾ ಸಚಿವರಾದ ಡಾ.ಜಿ. ಪರಮೇಶ್ವರ್‌, ಕೆ.ಎನ್‌.ರಾಜಣ್ಣ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿದ್ದರು.

ಸಭೆಯಲ್ಲಿ ಕೇಳಿಬಂದ ಸಲಹೆ ಪ್ರಕಾರ, ತುಮಕೂರು ಶಾಖಾ ಕಾಲುವೆ ಜಾಲದ ಪ್ರಾರಂಭದಲ್ಲಿ ನಿಗದಿಪಡಿಸಿದ ನೀರು ಹರಿಸಲು ಉಂಟಾಗಬಹುದಾದ ತೊಂದರೆಗಳನ್ನು ಪರಿಹರಿಸಲು ಹಾಗೂ ತುಮಕೂರು ಶಾಖಾ ಕಾಲುವೆಯ ವಿವಿಧ ಭಾಗಗಳಿಗೆ ನಿಗದಿಯಾಗಿರುವ ನೀರನ್ನು ಹರಿಸಲು ಕೈಗೊಳ್ಳಬಹುದಾದ ನೀರು ನಿರ್ವಹಣಾ ಕ್ರಮಗಳಾದ ಹಾಗೂ ನಿಯಮಗಳ ಬಗ್ಗೆ ಅಧ್ಯಯನ ನಡೆಸಲು ತಾಂತ್ರಿಕ ಸಮಿತಿ ರಚಿಸಲಾಗಿದೆ.

ನಿವೃತ್ತ ಮುಖ್ಯ ಎಂಜಿನಿಯರ್‌ ಅರವಿಂದ ಡಿ. ಕಣಗಿಲೆ ಸಮಿತಿ ಅಧ್ಯಕ್ಷರಾಗಿದ್ದು, ನಿವೃತ್ತ ಪ್ರಧಾನ ಎಂಜಿನಿಯರ್‌ ಕೆ.ಬಾಲಕೃಷ್ಣ, ನಿವೃತ್ತ ಮುಖ್ಯ ಎಂಜಿನಿಯರುಗಳಾದ ಶಂಕರೇಗೌಡ, ಎಂ.ಜಿ.ಶಿವಕುಮಾ ಸದಸ್ಯರಾಗಿದ್ದು, ಹೇಮಾವತಿ ನಾಲಾ ವೃತ್ತದ ಅಧೀಕ್ಷಕ ಎಂಜಿನಿಯರ್‌ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

70 ಕಿ.ಮೀ.ನಿಂದ 166.70 ಕಿ.ಮೀ.ವರೆಗೆ ನೀರು ಹರಿಸುವ ಮಾರ್ಗದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಅಧ್ಯಯನ ನಡೆಸಿ ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.ತುಮಕೂರು ಶಾಖಾ ಕಾಲುವೆಯ ಅಚ್ಚುಕಟ್ಟು ಪ್ರದೇಶಗಳಿಗೆ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಬಗ್ಗೆಯೂ ಸಮಿತಿ ಅಧ್ಯಯನ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.

RELATED ARTICLES

Latest News