ಬೆಂಗಳೂರು,ಜು.7- ಈಜು, ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟವರು ಬಿಜೆಪಿ ಪಕ್ಷದಲ್ಲಿರುವಾಗ ಬಿಜೆಪಿ ಈಜನ್ನು ಕ್ರೀಡೆಯಾಗಿ ನೋಡಲು ಹೇಗೆ ಸಾಧ್ಯ? ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಟೀಕೆಗೆ ತಿರುಗೇಟು ನೀಡಿರುವ ಅವರು, ಬಿಜೆಪಿಯವರಿಗೆ ಈಜು ಒಂದು ಮೋಜಿನ ರೀತಿ ಕಾಣುತ್ತದೆ, ಈಜುವುದು ಮೋಜು ಮಸ್ತಿಯೇ ಎಂದು ಪ್ರಶ್ನಿಸಿದ್ದಾರೆ.ತಾವು ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳಕ್ಕೆ ಭೇಟಿ ನೀಡಿ ಈಜಿದ್ದು ಮೋಜು ಮಸ್ತಿಗಲ್ಲ.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಈ ಹಿಂದೆ ಈಜುಕೊಳ ಉದ್ಘಾಟನೆಯಲ್ಲಿ ನನಗೆ ಪಾಲ್ಗೊಳ್ಳಲು ಆಗಿರಲಿಲ್ಲ. ಆ ಸಂದರ್ಭದಲ್ಲಿ ಅಲ್ಲಿಯ ಕ್ರೆಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ಹಿನ್ನೆಲೆಯಲ್ಲಿ ನಾನು ಇನ್ನಮೆ ಭೇಟಿ ನೀಡಿ ಈಜುಕೊಳದಲ್ಲಿ ಈಜುತ್ತೇನೆ ಎಂದು ಭರವಸೆ ನೀಡ್ದೆಿ. ಅದರಂತೆ ಸಮಯ ಬಿಡುವು ಮಾಡಿಕೊಂಡು ಈಜುಕೊಳಕ್ಕೆ ಭೇಟಿ ನೀಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಈಜುವುದಕ್ಕೂ, ರಾಜ್ಯದಲ್ಲಿ ಡೆಂಘೀ ಹೆಚ್ಚಳಕ್ಕೂ ಎತ್ತಣ ಸಂಬಧ. ಅಷ್ಟಕ್ಕೂ ಮಂಗಳೂರಿಗೆ ಬಂದು ನಾನು ಮೊದಲ ಮಾಡಿದ ಕೆಲಸವೇ ಡೆಂಘೀ ತಪಾಸಣೆ. ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳ ನಾಶ ಪಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ. ಮನೆ ಮನೆಗೆ ತೆರಳಿ ನೀರು ಶೇಖರಣೆಯಾದ ಸ್ಥಳಗಳನ್ನು ಪರಿಶೀಲಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದ್ದಾರೆ.